ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಳಗಾವಿ ವಿವಾದ; ತಿದ್ದುಪಡಿಗೆ ಮಹಾರಾಷ್ಟ್ರಕ್ಕೆ ಅವಕಾಶ (Belgaum row | Maharashtra | Karnataka | Supreme Court)
Bookmark and Share Feedback Print
 
ಬೆಳಗಾವಿ ಗಡಿ ವಿವಾದದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಮಹಾರಾಷ್ಟ್ರ ಇದೀಗ ಕೊಂಚ ನಿರಾಳತೆ ಪಡೆದುಕೊಂಡಿದೆ. ಕರ್ನಾಟಕದ ಕೆಲವು ಪ್ರದೇಶಗಳು ತನಗೆ ಸೇರಬೇಕೆಂದು ಕೇವಲ ಭಾಷೆಯ ಕಾರಣವನ್ನಷ್ಟೇ ನೀಡಿದ್ದ ರಾಜ್ಯ ಮತ್ತಷ್ಟು ವಿಚಾರಗಳನ್ನು ಸೇರಿಸುವ ಸಂಬಂಧ ಮಾಡಿದ್ದ ಮನವಿಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.

ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳ 800ಕ್ಕೂ ಅಧಿಕ ಗ್ರಾಮಗಳಲ್ಲಿ ಮರಾಠಿಗರೇ ಹೆಚ್ಚಿರುವುದರಿಂದ ಆ ಪ್ರದೇಶಗಳು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿತ್ತು. ಆದರೆ ಕೇವಲ ಭಾಷೆಯ ಆಧಾರದಲ್ಲಿ ರಾಜ್ಯಕ್ಕೆ ಆ ಪ್ರದೇಶಗಳನ್ನು ಸೇರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಪರ ಅಫಿದಾವಿತ್ ಸಲ್ಲಿಸಿತ್ತು.

2004ರ ಮಾರ್ಚ್ 29ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಮಹಾರಾಷ್ಟ್ರಕ್ಕೆ ನ್ಯಾಯಮೂರ್ತಿ ಜೆ.ಎಂ. ಪಂಚಾಲ್ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಮಹಾರಾಷ್ಟ್ರವು ತನ್ನ ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸಿದ ಎಂಟು ವಾರಗಳೊಳಗೆ ಕರ್ನಾಟಕ ಸರಕಾರವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ಸಂದರ್ಭದಲ್ಲಿ ತಿಳಿಸಿದೆ.

ಕರ್ನಾಟಕಕ್ಕೆ ಈ ಜಿಲ್ಲೆಗಳನ್ನು ಸೇರಿಸುವ ಸಂದರ್ಭದಲ್ಲಿ ಅನುಸರಿಸಬೇಕಾಗಿದ್ದ ಪ್ರಧಾನ ಮಾನದಂಡಗಳಾದ ಜನರ ಆಶಯ ಮತ್ತು ಭಾಷಾ ವಿಚಾರಗಳನ್ನು ಪರಿಗಣಿಸಿರಲಿಲ್ಲ ಎಂದು ಮಹಾರಾಷ್ಟ್ರ ಪರ ವಕೀಲರಾದ ಹರೀಶ್ ಸಾಲ್ವೆ ಮತ್ತು ವಿನೋದ್ ಬಾಬ್ದೆ ಸುಪ್ರೀಂ ಗಮನಕ್ಕೆ ತಂದರು.

ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಹರ್ಯಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ಗಳ ನಡುವಿನ ಗಡಿ ಗುರುತಿಸುವಿಕೆ ಸಂದರ್ಭದಲ್ಲಿ ಮೇಲೆ ಹೇಳಿದ ಎಲ್ಲಾ ಮಾನದಂಡಗಳನ್ನು ಅನುಸರಿಸಲಾಗಿತ್ತು ಎಂದು ಅರ್ಜಿಯನ್ನು ಪರಿಷ್ಕರಣೆ ನಡೆಸಲು ಅವಕಾಶ ನೀಡಬೇಕೆಂದು ಮಹಾರಾಷ್ಟ್ರ ವಕೀಲ ಶಿವಾಜಿ ಯಾದವ್ ಮನವಿ ಮಾಡಿಕೊಳ್ಳುವ ಸಂದರ್ಭದಲ್ಲಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದರು.

ಆದರೆ ಇದನ್ನು ಕರ್ನಾಟಕದ ವಕೀಲ ಫಾಲಿ ನಾರಿಮನ್ ತೀವ್ರವಾಗಿ ವಿರೋಧಿಸಿದರು. ಆರು ವರ್ಷಗಳಷ್ಟು ಹಳೆಯ ಅರ್ಜಿಯನ್ನು ಈಗ ತಿದ್ದುಪಡಿ ಮಾಡುವುದು ಸರಿಯಲ್ಲ ಎಂದರು. ಆದರೂ ಮಹಾರಾಷ್ಟ್ರ ವಾದಕ್ಕೆ ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿ, ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸುವಂತೆ ಆದೇಶ ನೀಡಿದೆ.

ಮಹಾ ವಿಧಾನಸಭೆಯಲ್ಲೂ ಗದ್ದಲ...
ಬೆಳಗಾವಿ ಗಡಿ ವಿವಾದವು ಮಹಾರಾಷ್ಟ್ರ ವಿಧಾನಸಭೆಯಲ್ಲೂ ಪ್ರತಿನಿಧಿಸಿದ್ದು, ಸದಸ್ಯರ ಕಳವಳಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಶೋಕ್ ಚೌಹಾನ್, ತಾನು ಶೀಘ್ರದಲ್ಲೇ ಪ್ರಧಾನ ಮಂತ್ರಿಯವರ ಬಳಿ ನಿಯೋಗವೊಂದನ್ನು ಕರೆದೊಯ್ಯುವುದಾಗಿ ಭರವಸೆ ನೀಡಿದರು.

ಬೆಳಗಾವಿ ವಿಚಾರದ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷ ಶಿವಸೇನೆ ಮತ್ತು ಬಿಜೆಪಿ ಸದಸ್ಯರು ಆಗ್ರಹಿಸಿ ಗದ್ದಲ ಎಬ್ಬಿಸಿದರು. ಕೇಂದ್ರವು ಮರಾಠಿ ಜನತೆಯ ಭಾವನೆಗಳನ್ನು ಗೌರವಿಸದೆ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ