ಇದು ಕಾಂಗ್ರೆಸ್ ಹೇಳಿದ್ದರೆ ಅದು ದೊಡ್ಡ ವಿಚಾರವೇ ಆಗುತ್ತಿರಲಿಲ್ಲ. ಆದರೆ ಇದೀಗ ಸ್ವತಃ ಬಿಜೆಪಿ ಮುಖಂಡರೇ ಹೇಳಿರುವುದು. ನಿತಿನ್ ಗಡ್ಕರಿಯವರು ಸಾರ್ವಜನಿಕವಾಗಿ ಮಾತನಾಡುವಾಗ ತನ್ನ ಮಾತಿನ ಮೇಲೆ ಹಿಡಿತ ಹೊಂದಿರಲಿ ಎಂದು ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಸಲಹೆ ನೀಡಿದ್ದಾರೆ.
ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕೂಡ ಗಡ್ಕರಿಯತ್ತ ವಾಗ್ಬಾಣ ಹೊರಡಿಸಿದ್ದಾರೆ. ಬಾಯಿಗೆ ಬಂದಂತೆ ಮಾತನಾಡದಿರಿ ಎಂದು ಎಚ್ಚರಿಸಿದ್ದಾರೆ.
ಅಫ್ಜಲ್ ಗುರು ಕಾಂಗ್ರೆಸ್ಸಿಗರ ಅಳಿಯನೇ ಎಂದು ಕಳೆದ ವಾರ ಪ್ರಶ್ನಿಸಿದ್ದ ಗಡ್ಕರಿ, ದಿಗ್ವಿಜಯ್ ಸಿಂಗ್‌ರತ್ತಲೂ ಟೀಕಾ ಪ್ರಹಾರ ನಡೆಸಿದ್ದರು. ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಪುತ್ರ ಎಂದು ಬಿಜೆಪಿ ಅಧ್ಯಕ್ಷ ಬಣ್ಣಿಸಿದ್ದರು.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೊಬ್ಬರು ಅಜಂಗಢದಲ್ಲಿ ಭಯೋತ್ಪಾದಕರ ಕುಟುಂಬಗಳ ಜತೆ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಶಿವಾಜಿ, ಮಹಾರಾಣಾ ಪ್ರತಾಪ್ ಅಥವಾ ಔರಂಗಜೇಬ್ ಇವರಲ್ಲಿ ಆ ವ್ಯಕ್ತಿ ಯಾವ ವಂಶಜನೆಂದು ಕಾಂಗ್ರೆಸ್ ನಿರ್ಧರಿಸಬೇಕು ಎಂದು ಜುಲೈ ನಾಲ್ಕರಂದು ಗಡ್ಕರಿಯವರು ಪರೋಕ್ಷವಾಗಿ ದಿಗ್ವಿಜಯ್ ಸಿಂಗ್‌ರನ್ನು ಉಲ್ಲೇಖಿಸಿದ್ದರು.
ಆದರೆ ಇದಕ್ಕೆ ಮರು ಪ್ರಶ್ನೆ ಹಾಕಿರುವ ದಿಗ್ವಿಜಯ್, 'ಈ ಹಿಂದೆ ಅಫ್ಜಲ್ ಗುರುವನ್ನು ಸಮರ್ಥಿಸಿಕೊಂಡಿದ್ದ ರಾಮ್ ಜೇಠ್ಮಲಾನಿಯವರು ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇದಕ್ಕಾಗಿ ಗಡ್ಕರಿಯವರಿಗೆ ಧನ್ಯವಾದ ಹೇಳಬೇಕು. ಅವರ ಜತೆಗಿನ ಸಂಬಂಧದ ಕುರಿತು ವಿವರಣೆ ನೀಡುವಂತೆ ನಾನು ಸವಾಲೆಸೆಯುತ್ತಿದ್ದೇನೆ' ಎಂದಿದ್ದಾರೆ.
ಜೋಷಿಯಿಂದ ಛೀಮಾರಿ... ದಿಗ್ವಿಜಯ್ ಸಿಂಗ್ ವಿರುದ್ಧದ ಟೀಕೆಗೆ ಸ್ವತಃ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾರಣಾಸಿಯಲ್ಲಿ ಮಾತನಾಡುತ್ತಿದ್ದ ಅವರು, ಸಿಂಗ್ ಕುರಿತು ಮಾತನಾಡುವಾಗ ಗಡ್ಕರಿಯವರು ಸಂಯಮ ಕಳೆದುಕೊಳ್ಳಬಾರದಿತ್ತು; ಯಾವುದೇ ರೀತಿಯಲ್ಲಿ ತೀಕ್ಷ್ಣ ಹೇಳಿಕೆ ನೀಡಿದರೂ ಅದು ಸಭ್ಯತೆಯನ್ನು ಮೀರಬಾರದು ಎಂದರು.
ಆರಂಭದಲ್ಲಿ ಗಡ್ಕರಿ ಹೇಳಿಕೆಗೆ ಪ್ರತಿಕ್ರಿಯಿಸಲು ಜೋಷಿ ನಿರಾಕರಿಸಿದರಾದರೂ, ಪತ್ರಕರ್ತರು ಪದೇ ಪದೇ ಕೇಳಿಕೊಂಡ ನಂತರ, 'ಯಾವುದೇ ರೀತಿಯ ಟೀಕೆಗಳನ್ನು ಮಾಡುವುದಿದ್ದರೂ ಅದಕ್ಕಾಗಿ ಸೂಕ್ತ ಪದಗಳನ್ನು ಬಳಸಿಕೊಳ್ಳಬೇಕು, ಅದು ಸಭ್ಯತೆಯನ್ನು ಮೀರಬಾರದು' ಎಂದರು.