ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಬಗೆಹರಿಯುವ ವರೆಗೆ ಕರ್ನಾಟಕದ ಮರಾಠಿ ಭಾಷಿಗರ ಪ್ರಾಬಲ್ಯವಿರುವ 865 ಗ್ರಾಮಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಕೇಂದ್ರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಆಗ್ರಹಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ವಿವಾದ ಪರಿಹಾರ ಕಾಣುವ ತನಕ ಕರ್ನಾಟಕದ ವಶದಲ್ಲಿರುವ 865 ಮರಾಠಿ ಗ್ರಾಮಗಳನ್ನು ಕೇಂದ್ರಾಡಳಿತಕ್ಕೆ ಒಪ್ಪಿಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ವಿವಾದದ ಸಂಬಂಧ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಚೌಹಾನ್ ಒತ್ತಾಯಿಸಿದ್ದಾರೆ.
ನಾಳೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ಭೇಟಿ ಮಾಡಲಿರುವ ಮುಖ್ಯಮಂತ್ರಿ ಚೌಹಾನ್, ಈ ಕುರಿತು ಮೇಲಿನ ಒತ್ತಾಯವನ್ನು ಮಾಡಲಿದ್ದಾರೆ.
ವಿವಾದಿತ ಗ್ರಾಮಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸದೆ ಬೇರೆ ಅವಕಾಶಗಳಿಲ್ಲ. ಈ ಸಂಬಂಧ ನಾವು ವಿವಾದದಲ್ಲಿ ಸಹಕಾರ ನೀಡುವಂತೆ ಪ್ರಧಾನಿಯವರಿಗೆ ಮನವಿ ಮಾಡಲಿದ್ದೇವೆ ಎಂದು ಚೌಹಾನ್ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂಬ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ, ಕರ್ನಾಟಕ ಸರಕಾರವು ಆ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡುತ್ತಿದೆ; ಹಾಗಾಗಿ ಆ ಪ್ರಾಂತ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಾರೀ ಬೆದರಿಕೆಗಳಿವೆ. ಮರಾಠಿ ಜನತೆಯನ್ನು ತೀರಾ ಹೀನಾಯವಾಗಿ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಅದೇ ಹೊತ್ತಿಗೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ ರಾಜ್ಯದ ವಿರೋಧ ಪಕ್ಷ ಮಧ್ಯಪ್ರವೇಶಿಸಬೇಕು ಎಂದೂ ಅವರು ಆಗ್ರಹಿಸಿದರು.
ಸುಪ್ರೀಂ ಕೋರ್ಟ್‌ನಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ನಿಮ್ಮ (ಬಿಜೆಪಿ) ಸರಕಾರ ಅಲ್ಲಿರುವುದರಿಂದ (ಕರ್ನಾಟಕ) ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾದರೆ ನಾನು ಅದಕ್ಕೆ ಸಿದ್ಧನಿದ್ದೇನೆ ಎಂದರು.
ಕರ್ನಾಟಕದ ವಶದಲ್ಲಿರುವ ಬೆಳಗಾವಿ, ಕಾರವಾರ, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿನ ಮರಾಠಿ ಪ್ರಾಬಲ್ಯದ 865 ಗ್ರಾಮಗಳನ್ನು ತನ್ನ ವಶಕ್ಕೆ ನೀಡಬೇಕೆಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಅಫಿದಾವಿತ್ ಸಲ್ಲಿಸಿತ್ತು.
ಕೇವಲ ಭಾಷೆಯ ಆಧಾರದಲ್ಲಿ ರಾಜ್ಯಗಳ ಎಲ್ಲೆಯನ್ನು ನಿರ್ಧರಿಸುವುದು ಉಚಿತವಲ್ಲ ಎಂದು ಕೇಂದ್ರ ಹೇಳಿತ್ತು. ಈ ಸಂಬಂಧ ಸೋಮವಾರ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದೆ. ಈ ನಡುವೆ ತನ್ನ ಆರು ವರ್ಷಗಳ ಹಳೆಯ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕೆಂಬ ಮಹಾರಾಷ್ಟ್ರದ ಮನವಿಗೆ ಸುಪ್ರೀಂ ಅಸ್ತು ಎಂದಿದೆ. ನಾಲ್ಕು ವಾರಗಳ ನಂತರ ಪ್ರಕರಣ ಮತ್ತೆ ಕೋರ್ಟ್ ಮುಂದೆ ಬರಲಿದೆ.