ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಎಸ್ಐ ವಿರುದ್ಧ ಪಿಳ್ಳೈ ಹೇಳಿಕೆ ನೀಡಬಾರದಿತ್ತು: ಕೃಷ್ಣ (ISI | Mumbai attacks | SM Krishna | GK Pillai)
Bookmark and Share Feedback Print
 
ಮುಂಬೈ ದಾಳಿಯಲ್ಲಿ ಐಎಸ್ಐ ಕೈವಾಡವಿದೆ ಎಂಬ ಹೇಳಿಕೆಯನ್ನು ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ನೀಡಬಾರದಿತ್ತು ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ! ಆ ಮೂಲಕ ಭಾರತದ ಅಧಿಕಾರಿಯೊಬ್ಬರನ್ನು ತನ್ನೆದುರೇ ಅವಮಾನಿಸುತ್ತಿದ್ದರೂ ಮಗುಮ್ಮಾಗಿ ಕುಳಿತಿದ್ದ ಸಚಿವರ ಕರಾಮತ್ತು ಹೊರಗೆ ಬಿದ್ದಿದೆ.

ಒಂದು ವೇಳೆ ನಾನು ಸರಕಾರದ ಗೃಹ ಕಾರ್ಯದರ್ಶಿಯಾಗಿರುತ್ತಿದ್ದರೆ, ಹೆಡ್ಲಿ ವರದಿಯ ಕುರಿತು ನಾನು ಮಾತನಾಡುತ್ತಿರಲಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾತುಕತೆ ಮುಂದುವರಿಯಬೇಕಾಗಿದೆ, ಇದನ್ನು ಬಿಟ್ಟರೆ ಸಮಸ್ಯೆಗಳನ್ನು ಪರಿಹರಿಸಲು ಬೇರೆ ಮಾರ್ಗಗಳಿಲ್ಲ ಎಂದು ಕೃಷ್ಣ ಇಂದು ಹೇಳಿಕೆ ನೀಡಿದ್ದಾರೆ.

ಪಿಳ್ಳೈಯವರು ಹೇಳಿಕೆ ನೀಡುವ ಮೊದಲು ನನ್ನ ಹೇಳಿಕೆಗಾಗಿ ಕಾಯಬೇಕಿತ್ತು. ನನ್ನ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡದೇ ಇರುತ್ತಿದ್ದರೆ ಅದು ಬಹುಶಃ ಜಾಣ್ಮೆಯ ಕ್ರಮವಾಗಿರುತ್ತಿತ್ತು ಎಂದು ಭಾರತದ ಗೃಹ ಕಾರ್ಯದರ್ಶಿಯವರ ಕುರಿತು ಮೊದಲ ಬಾರಿಗೆ ತನ್ನ ಅಸಮಾಧಾನವನ್ನು ಸಚಿವರು ಹೊರಗೆಡವಿದ್ದಾರೆ.

ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಗೆ ಎಲ್ಲರೂ ಯತ್ನಿಸಬೇಕಾದ ಹೊತ್ತಿನಲ್ಲಿ ನಡೆದಿರುವ ಪ್ರಸಂಗ ಬೇಸರ ತರಿಸಿದೆ, ಹಾಗೆ ನಡೆಯಬಾರದಿತ್ತು. ಈ ಕುರಿತು ನಾನು ಪ್ರಧಾನಿ ಮನಮೋಹನ್ ಸಿಂಗ್ ಅವರ ಜತೆ ಚರ್ಚೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆದದ್ದು ಇಷ್ಟು...
2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಮತ್ತು ಹಫೀಜ್ ಸಯೀದ್ ಪ್ರಮುಖ ರೂವಾರಿಗಳು ಎಂದು ಅಮೆರಿಕಾ ಬಂಧನದಲ್ಲಿರುವ ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಹೇಳಿಕೆಯನ್ನು ಪಿಳ್ಳೈ ಪತ್ರಿಕೆಯೊಂದಕ್ಕೆ ಹೇಳಿದ್ದರು.

ಇದರಿಂದ ತೀವ್ರ ಮುಜುಗರ ಅನುಭವಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, ಪಿಳ್ಳೈ ಆರೋಪ ಅನುಚಿತ ಎಂದು ಬಹಿರಂಗವಾಗಿಯೇ ಹೇಳಿದ್ದರು.

ಇಸ್ಲಾಮಾಬಾದ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯೇ ಬರುತ್ತಿದ್ದ ಹೊತ್ತಿನಲ್ಲಿ 'ಮುಂಬೈ ದಾಳಿಯಲ್ಲಿ ಐಎಸ್ಐ ಕೈವಾಡವಿದೆ ಎಂಬ ಪಿಳ್ಳೈ ಆರೋಪಕ್ಕೆ ಏನು ಹೇಳುತ್ತೀರಿ?' ಎಂಬ ಪ್ರಶ್ನೆ ಬಂದಿತ್ತು.

ಇದಕ್ಕೆ ಉತ್ತರಿಸಿದ್ದ ಖುರೇಷಿ, 'ಅವರ ಆರೋಪ ಅನುಚಿತವಾದದ್ದು ಎಂದು ಇಬ್ಬರೂ ಸಚಿವರು ಒಪ್ಪಿಕೊಂಡಿದ್ದೇವೆ' ಎಂದಿದ್ದರು. ಆದರೆ ಪಕ್ಕದಲ್ಲೇ ಕುಳಿತಿದ್ದ ಸಚಿವ ಕೃಷ್ಣ, ಭಾರತದ ಗೃಹ ಕಾರ್ಯದರ್ಶಿಯನ್ನು ಸಮರ್ಥಿಸಿಕೊಳ್ಳುವ ಅಥವಾ ಪಾಕಿಸ್ತಾನದ ಹೇಳಿಕೆಯನ್ನು ಆಕ್ಷೇಪಿಸುವ ಯಾವುದೇ ನಡೆಗೂ ಮುಂದಾಗದೆ ಅಚ್ಚರಿ ಹುಟ್ಟಿಸಿದ್ದರು.

ಭಾರತದ ಉನ್ನತ ಅಧಿಕಾರಿಯೊಬ್ಬರನ್ನು ಪಾಕಿಸ್ತಾನವು ಈ ರೀತಿ ನಡೆಸಿಕೊಂಡರೂ ಭಾರತದ ವಿದೇಶಾಂಗ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿಯನ್ನೆಬ್ಬಿಸಿತ್ತು.

ಮುಂಬೈ ದಾಳಿಯಲ್ಲಿ ಐಎಸ್ಐ ಕೈವಾಡವಿದೆ ಎಂಬುದನ್ನು ಹೇಳಬಾರದಿತ್ತು ಎಂದು ಹೇಳುವ ಮೂಲಕ ಇದೀಗ ಭಾರತದ ವಿದೇಶಾಂಗ ಸಚಿವರೇ ಪಿಳ್ಳೈ ವಿರುದ್ಧ ತಿರುಗಿ ಬಿದ್ದಿರುವುದು ಅಚ್ಚರಿ ತಂದಿದೆ.
ಸಂಬಂಧಿತ ಮಾಹಿತಿ ಹುಡುಕಿ