ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಏಳು ದಿನಗಳ ಕಾಲ ತನ್ನ ಕಸ್ಟಡಿಗೆ ಒಪ್ಪಿಸಬೇಕು ಎಂಬ ಸಿಬಿಐ ಮನವಿಗೆ ನ್ಯಾಯಾಲಯ ನಕಾರ ಸೂಚಿಸಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಎ.ಐ. ರಾವಲ್ ಅವರು ಸಿಬಿಐ ಮನವಿಯನ್ನು ತಳ್ಳಿ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಅಮಿತ್ ಶಾ, ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಅವರನ್ನು ನಮ್ಮ ವಶಕ್ಕೆ ನೀಡಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಇದೀಗ ನ್ಯಾಯಾಲಯ ಮನವಿಯನ್ನು ಪುರಸ್ಕರಿಸದೇ ಇರುವುದರಿಂದ ಸಿಬಿಐ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ.
ಜುಲೈ 25ರಂದು ಸಿಬಿಐ ಎದುರು ಶರಣಾಗಿದ್ದ ಅಮಿತ್ ಶಾ ಅವರನ್ನು ಬಂಧಿಸಲಾಗಿತ್ತು. ಅದಕ್ಕೂ ಮೊದಲು ಜುಲೈ 23ರಂದು ಅವರ ವಿರುದ್ಧ 30,000 ಪುಟಗಳ ಆರೋಪಪಟ್ಟಿಯನ್ನು ಸಿಬಿಐ ದಾಖಲಿಸಿತ್ತು. ಸೊಹ್ರಾಬುದ್ದೀನ್ ಕೊಲೆ, ಅಪಹರಣ ಮತ್ತು ಪಿತೂರಿ ಆರೋಪಗಳನ್ನು ಮಾಜಿ ಸಚಿವರ ಮೇಲೆ ಹೊರಿಸಲಾಗಿತ್ತು.
ಜುಲೈ 25ರಂದು ಅಮಿತ್ ಶಾ ಅವರನ್ನು ಬಂಧಿಸಲಾಗಿತ್ತಾದರೂ, ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ಮನವಿ ಮಾಡದೇ ಇರುವ ಮೂಲಕ ಅಚ್ಚರಿ ಮೂಡಿಸಿತ್ತು. ತಾನು ನ್ಯಾಯಾಂಗ ಬಂಧನದಲ್ಲೇ ಅವರನ್ನು ವಿಚಾರಣೆ ನಡೆಸುವುದಾಗಿ ಹೇಳಿತ್ತು. ಅದರಂತೆ ಜುಲೈ ಕೊನೆಯ ವಾರದಲ್ಲಿ ಸಿಬಿಐ ವಿಚಾರಣೆಯನ್ನೂ ನಡೆಸಿತ್ತು.
ಇದೀಗ ತನ್ನ ವಶಕ್ಕೆ ಒಪ್ಪಿಸಬೇಕೆಂಬ ಸಿಬಿಐ ಮನವಿಯನ್ನು ನ್ಯಾಯಾಲಯವು ತಳ್ಳಿ ಹಾಕಿರುವುದರಿಂದ, ಅಮಿತ್ ಶಾ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯುವ ಆಗಸ್ಟ್ 11ರವರೆಗೆ ಅವರು ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿಯಲಿದ್ದಾರೆ.
ಕೆಲ ದಿನಗಳ ಹಿಂದೆ ಸೊಹ್ರಾಬುದ್ದೀನ್ ಪ್ರಕರಣವನ್ನು ಗುಜರಾತ್‌ನಿಂದ ಹೊರಗಡೆ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಸಿಬಿಐ ಮನವಿ ಮಾಡಲಿದೆ ಎಂದು ವರದಿಗಳು ಹೇಳಿದ್ದವು. ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದ ತನಿಖಾ ಸಂಸ್ಥೆ, ತಾನು ಅಂತಹ ಯಾವುದೇ ಮನವಿಯನ್ನು ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದೀಗ ಸಿಬಿಐ ಮನವಿಗೆ ತೀವ್ರ ಹಿನ್ನಡೆಯಾಗಿರುವುದರಿಂದ ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.