ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ ತಡೆಯಲ್ಲಿ ರಾಜ್ಯದ ಪಾಲೇ ಹೆಚ್ಚು: ಪ್ರಣಬ್
(Opposition | Finance Minister | Pranab Mukherjee | price rise)
ಬೆಲೆಯೇರಿಕೆಯನ್ನು ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರಕ್ಕಿಂತಲೂ ರಾಜ್ಯ ಸರಕಾರಗಳದ್ದು ಮಹತ್ವದ ಪಾತ್ರ ಎಂದಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಪ್ರತಿಪಕ್ಷಗಳ ಟೀಕೆಯಿಂದ ತಾಳ್ಮೆ ಕಳೆದುಕೊಂಡ ಪ್ರಸಂಗವೂ ಇಂದು ಲೋಕಸಭೆಯಲ್ಲಿ ನಡೆದಿದೆ.
ಬೆಲೆಯೇರಿಕೆ ಕುರಿತು ಹಣದುಬ್ಬರದ ಒತ್ತಡದ ಹೆಸರಿನಲ್ಲಿ ನಡೆದ ಚರ್ಚೆಯ ಕುರಿತು ಮಾತನಾಡುತ್ತಿದ್ದ ಅವರು, ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಲು ಪ್ರತಿಪಕ್ಷಗಳು ಸಹಕಾರ ನೀಡಬೇಕು. ಈ ಸಂಬಂಧ ಮಸೂದೆಯನ್ನು ಅಧಿವೇಶನದ ಇದೇ ಅವಧಿಯಲ್ಲಿ ಮಂಡಿಸಬೇಕಾಗಿದೆ. ಆ ಮೂಲಕ ಬೆಲೆಯೇರಿಕೆಯನ್ನು ನಿಯಂತ್ರಿಸಬಹುದಾಗಿದೆ ಎಂದರು.
ನಂತರ ರಾಜ್ಯ ಸರಕಾರಗಳತ್ತ ಸಚಿವರು ಬೆಟ್ಟು ಮಾಡಲಾರಂಭಿಸಿದರು. ಬೆಲೆಯೇರಿಕೆಯನ್ನು ನಿಯಂತ್ರಿಸುವ ಅಧಿಕಾರಗಳು ರಾಜ್ಯಗಳ ಕೈಯಲ್ಲೇ ಇವೆ. ಅವುಗಳು ದಾಸ್ತಾನುಗಳನ್ನು ಪರಿಶೀಲನೆ ನಡೆಸುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಆದರೆ ನಾವು ಕೇವಲ ರಾಜ್ಯಗಳ ಮೇಲೆಯೇ ಹೊಣೆಗಾರಿಕೆಯನ್ನು ತೇಲಿ ಬಿಡುವುದಿಲ್ಲ. ಜನತೆಯ ಕಷ್ಟಗಳಿಗೆ ರಾಜ್ಯಗಳು ಮತ್ತು ಕೇಂದ್ರ ಜತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಣಬ್ ಹೇಳಿದರು.
ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರಕಾರವು ಇದೀಗ ರಾಜ್ಯಗಳತ್ತ ಬೆಟ್ಟು ಮಾಡುತ್ತಿದೆ ಎಂದು ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಸಚಿವರನ್ನು ನೇರವಾಗಿ ದೂಷಿಸಲಾರಂಭಿಸಿದವು.
ಇದರಿಂದ ಕುಪಿತಗೊಂಡ ಪ್ರಣಬ್, ಜನಸಾಮಾನ್ಯರ ಕುರಿತ ನನ್ನ ಕಾಳಜಿಯನ್ನು ಲೇವಡಿ ಮಾಡಬೇಡಿ ಎಂದು ವಿಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ನಾನು ಹಳ್ಳಿಯಿಂದ ಬಂದವನು. ಹತ್ತನೇ ತರಗತಿಯವರೆಗೆ ನಾನು ಓದಿದ್ದು ಸೀಮೆಎಣ್ಣೆ ಬುಡ್ಡಿ ದೀಪದಡಿಯಲ್ಲಿ. ದಿನಾ ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುತ್ತಿದ್ದೆ. ಸರಿಸುಮಾರು 10 ಕಿಲೋ ಮೀಟರ್ ನಡೆಯುತ್ತಿದ್ದೆ. ಜನಸಾಮಾನ್ಯರ ಜೀವನದ ಕುರಿತು ನನಗೆ ಹತ್ತಿರದ ಸಂಬಂಧವಿದೆ. ಹಾಗಾಗಿ ನನ್ನ ಸೂಕ್ಷ್ಮಗ್ರಾಹಿತನದ ಕುರಿತು ಅಪಹಾಸ್ಯ ಮಾಡಬೇಡಿ ಎಂದರು.
ಪ್ರತಿಪಕ್ಷಗಳು ಆರೋಪಿಸುತ್ತಿರುವ ಸರಕಾರದ ಅಸಂವೇದನೆ ಕುರಿತು ವಿತ್ತ ಸಚಿವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು. ಎನ್‌ಡಿಎ ಆಡಳಿತಾವಧಿಯಲ್ಲಿ ಸೀಮೆಎಣ್ಣೆ ದರವನ್ನು ಎರಡು ರೂಪಾಯಿ ಏರಿಸಿ ಪ್ರತಿ ಲೀಟರಿಗೆ ಒಂಬತ್ತು ರೂಪಾಯಿ ಮಾಡಲಾಗಿರುವುದು ಮತ್ತು ಈಗ ಒಂಬತ್ತು ರೂಪಾಯಿಯಿಂದ 12 ರೂಪಾಯಿ ಮಾಡಿರುವುದು -- ಇಲ್ಲಿ ಪ್ರತಿಪಕ್ಷದ ಸಂವೇದನೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಯುಪಿಎ ಸರಕಾರವು ಜೂನ್ ತಿಂಗಳಲ್ಲಿ ಸೀಮೆಎಣ್ಣೆ ದರವನ್ನು ಪ್ರತಿ ಲೀಟರಿಗೆ ಮೂರು ರೂಪಾಯಿ, ಅಡುಗೆ ಅನಿಲ ಸಿಲಿಂಡರಿಗೆ 35 ರೂಪಾಯಿ, ಡೀಸೆಲ್‌ನಲ್ಲಿ ಎರಡು ರೂಪಾಯಿ ಮತ್ತು ಪೆಟ್ರೋಲ್ ದರವನ್ನು ಮೂರು ರೂಪಾಯಿ ಹೆಚ್ಚಳಗೊಳಿಸಿತ್ತು.
ಅಕ್ಕಿ, ಗೋಧಿ ಹಿಟ್ಟು, ಕಡಲೆ ಬೇಳೆ, ಅವರೆ ಬೇಳೆ, ಸಕ್ಕರೆ, ಸಾಸಿವೆ ಎಣ್ಣೆ ದರಗಳು ಇಳಿಕೆಯಾಗಿವೆ. ಈರುಳ್ಳಿ ಕೂಡ ಅಗ್ಗವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಅನಿವಾರ್ಯವಾಗಿತ್ತು. ಇದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬಹುದಾಗಿದೆ. ರಾಜ್ಯಗಳ ಆದಾಯ ಶೇ.34ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಯಿಂದ ಬರುತ್ತಿದೆ. ಇದನ್ನು ಎಲ್ಲರೂ ಗಮನಿಸಬೇಕಾಗಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.