ದಾಂಪತ್ಯ ಬಿರುಕಿಗೆ ಏನೆಲ್ಲ ಕಾರಣಗಳು ಸಿಗಬಹುದು ಎಂದು ಹುಡುಕುತ್ತಾ ಹೋದಾಗ ಸಿಕ್ಕ ಕಾರಣ ಇದುವೇ ಎಂಬ ಬಗ್ಗೆ ಖಾತ್ರಿಯಿಲ್ಲ. ಆದರೆ ನಡೆದಿರುವುದಂತೂ ನಿಜ. ಗಂಡ ದಿನಾ ಬೆಳಿಗ್ಗೆ ಹಲ್ಲುಜ್ಜುತ್ತಿಲ್ಲ, ಸ್ಮಾರ್ಟಾಗಿ ಬಟ್ಟೆಗಳನ್ನು ತೊಡುತ್ತಿಲ್ಲ ಎಂಬುದನ್ನು ಮುಂದಿಟ್ಟು ಡೈವೋರ್ಸ್ ನೀಡಿ ಎಂದು ಮಹಿಳೆಯೊಬ್ಬಳು ಗೋಗರೆದಿದ್ದಾಳೆ.
ಉತ್ತರ ಪ್ರದೇಶದ ಬಾಗ್ಪಾತ್ ಜಿಲ್ಲೆಯ ಬರುವಾತ್ ನಗರದಲ್ಲಿನ ಮಹಿಳೆಯೇ ಇಂತಹ ಒಂದು ವಿಚಿತ್ರ ಅಹವಾಲನ್ನು ಸಲ್ಲಿಸಿರುವುದು. ಈಕೆಯನ್ನು ದೆಹಲಿ ಮೂಲದ ಟ್ರಕ್ ಚಾಲಕ ರಮೇಶನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆತನ ಜತೆ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ, ವಿಚ್ಛೇದನ ಬೇಕೆಂದು ಇದೀಗ ಅರ್ಜಿ ಸಲ್ಲಿಸಿದ್ದಾಳೆ.
ನನ್ನ ಗಂಡ ಪ್ರತಿದಿನ ಹಲ್ಲುಜ್ಜುತ್ತಿಲ್ಲ. ಹೊರಗಡೆ ಹೋಗುವಾಗ ಅಂಗಿಯನ್ನು ಪ್ಯಾಂಟಿನೊಳಗೆ (ಇನ್‌ಶರ್ಟ್) ತುರುಕುವುದಿಲ್ಲ. ಸುಂದರವಾಗಿ ಹೇಗೆ ಬಟ್ಟೆ ಧರಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಆತನಿಗಿಲ್ಲ ಎಂದು ಪತ್ನಿ ಸುನೀತಾ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಪ್ರಕರಣವನ್ನು ಕೊತ್ವಾಲಿ ಪೊಲೀಸ್ ಠಾಣೆಯ ಮಹಿಳಾ ವಿಭಾಗಕ್ಕೆ ರವಾನಿಸಿದ ಬಳಿಕ ರಮೇಶ್-ಸುನೀತಾ ದಂಪತಿಯನ್ನು ಕರೆಸಲಾಗಿದೆ. ಇಬ್ಬರಿಗೂ ಕರೆಸಿ ಬುದ್ಧಿ ಹೇಳಿ, ಭಿನ್ನಾಭಿಪ್ರಾಯ ಸರಿಪಡಿಸುವ ಸಲುವಾಗಿ ಹೀಗೆ ಮಾಡಲಾಗಿತ್ತು.
ಆದರೆ ರಮೇಶ್-ಸುನೀತಾ ರಾಜೀ ಸಂಧಾನಕ್ಕೆ ಯತ್ನಿಸಿದ ಪೊಲೀಸರ ಯತ್ನ ವಿಫಲವಾಗಿದೆ. ಪತ್ನಿಯ ಮನವೊಲಿಸಲು ರಮೇಶ್ ಮಾಡಿದ ಯತ್ನಗಳು ಫಲಕೊಟ್ಟಿಲ್ಲ.
ಪತ್ನಿಯ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ರಮೇಶ್ ನನ್ನ ವೃತ್ತಿ ಟ್ರಕ್ ಚಾಲನೆ. ಈ ಸಂದರ್ಭದಲ್ಲಿ ಇನ್‌ಶರ್ಟ್ ಮಾಡಿಕೊಂಡು ಗಾಡಿಯನ್ನು ಚಲಾಯಿಸುವುದು ಸಾಧ್ಯವಿಲ್ಲ. ಒತ್ತಡಗಳ ನಡುವೆ ನನಗೆ ಆಕೆ ಹೇಳಿದಂತೆ ಸ್ಮಾರ್ಟಾಗಿ ಇರುವುದು ಕಷ್ಟದ ಮಾತು ಎಂದು ವಿವರಿಸಿದ್ದಾನೆ.
ಮದುವೆಯಾಗಿ ಕೆಲವೇ ತಿಂಗಳುಗಳಷ್ಟೇ ಕಳೆದಿವೆ. ಆದರೆ ಮದುವೆಯ ಮೊದಲು ರಮೇಶ ಹೀಗಿರುತ್ತಾನೆಂದು ನನಗೆ ತಿಳಿದಿರಲಿಲ್ಲ ಎಂದು ಸುನೀತಾ ಹೇಳುತ್ತಾಳೆ. ಈ ಕುರಿತು ಪ್ರತಿ ಬಾರಿಯೂ ಗಂಡನ ಜತೆ ಜಗಳ ಮಾಡಿ ತವರಿಗೆ ಬರುತ್ತಾಳೆ. ಹೆತ್ತವರು ಒತ್ತಾಯ ಮಾಡಿ ಮರಳಿ ಗಂಡನ ಮನೆಗೆ ಕಳುಹಿಸುತ್ತಿದ್ದಾರೆ.
ಆದರೆ ಇತ್ತೀಚೆಗಷ್ಟೇ ನಾನು ಇನ್ನು ಗಂಡನ ಮನೆಗೆ ಹೋಗುವುದಿಲ್ಲ, ಅಲ್ಲದೆ ರಮೇಶನಿಂದ ಡೈವೋರ್ಸ್ ಬೇಕು ಎಂದು ಸುನೀತಾ ಹಠ ಹಿಡಿದಿದ್ದಳು. ಆತನ ಜತೆ ಇನ್ನು ಬಾಳೋದು ಸಾಧ್ಯವಿಲ್ಲ ಎನ್ನುವುದು ಅವಳ ಕೊನೆಯ ಮಾತು.
ಇವರ ದಾಂಪತ್ಯ ಮುಂದುವರಿಯುವ ಯಾವುದೇ ಸಾಧ್ಯತೆಗಳು ಕಾಣಿಸಿಕೊಳ್ಳದ ಕಾರಣ, ಪ್ರಕರಣ ನ್ಯಾಯಾಲಯಕ್ಕೆ ಹೋಗಲಿದೆ.