ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರಾಳ ಚಿತ್ರಗಳು ಧೂಮಪಾನಿಗಳನ್ನು ಇನ್ನೂ ದಿಕ್ಕೆಡಿಸಿಲ್ಲ! (Indian tobacco product | pictorial health warnings | cigarette | bidi)
Bookmark and Share Feedback Print
 
ಸಿಗರೇಟು-ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳ ಪ್ಯಾಕುಗಳ ಮೇಲೆ ಅದರ ಪರಿಣಾಮಗಳನ್ನು ಬಿಂಬಿಸುವ ಚಿತ್ರಗಳನ್ನು ಮುದ್ರಿಸಿದರೆ ಧೂಮಪಾನಿಗಳ ಮನಪರಿವರ್ತನೆಯಾಗಬಹುದು ಎಂದು ಅಂದಾಜಿಸಿದ್ದ ಸರಕಾರದ ಯತ್ನ ನೀರಲ್ಲಿಟ್ಟ ಹೋಮದಂತಾಗಿದೆ. ಹೌದು, ಇದು ಹೆಚ್ಚಿನ ಲಾಭ ತಂದಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.

ಒಂದು ಅಂದಾಜಿನ ಪ್ರಕಾರ ಪ್ರಸಕ್ತ ಭಾರತದಲ್ಲಿ 22 ಕೋಟಿ ತಂಬಾಕು ಬಳಕೆದಾರರಿದ್ದಾರೆ. ಅವರಲ್ಲಿ ಏಳು ಕೋಟಿ ಮಹಿಳೆಯರಾದರೆ, 15 ಕೋಟಿ ಪುರುಷರು. ಅಂದಾಜು 2,500 ಮಂದಿ ಪ್ರತಿದಿನ ತಂಬಾಕು ಸೇವನೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.
PR

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ಪರಿಗಣಿಸಿದ್ದ ಭಾರತ ಸರಕಾರವು 2006ರಲ್ಲಿ ನಿರ್ಧರಿಸಿದಂತೆ ಸಿಗರೇಟು, ಬೀಡಿ ಮತ್ತಿತರ ತಂಬಾಕು ಉತ್ಪನ್ನಗಳ ಪ್ಯಾಕುಗಳ ಮೇಲೆ ತಂಬಾಕು ಉತ್ಪನ್ನ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಚಿತ್ರಗಳನ್ನು ಮುದ್ರಿಸುವ ತೀರ್ಮಾನಕ್ಕೆ ಬಂದಿತ್ತು.

ಆದರೆ ತಂಬಾಕು ಚಟವನ್ನು ಅಂಟಿಸಿಕೊಂಡ ವಿಶ್ವದ ಇತರ ಜನರಿಗೆ ಹೋಲಿಸಿದಾಗ ಬಹುತೇಕ ಅದರ ಪ್ಯಾಕುಗಳ ಮೇಲೆ ಹಾಕಿರುವ ಚಿತ್ರಗಳನ್ನು ಅಥವಾ ಬರಹಗಳನ್ನು ನೋಡಿಯೇ ಇರದವರ ಪ್ರಮಾಣ ಭಾರತದಲ್ಲೇ ಹೆಚ್ಚು ಎಂದು ತಂಬಾಕು ವಿರೋಧಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.

ಇದರ ಪ್ರಕಾರ ಸಿಗರೇಟು ಸೇದುವವರಲ್ಲಿ ಶೇ.20.6, ಬೀಡಿ ಸೇದುವವರಲ್ಲಿ ಶೇ.15 ಮತ್ತು ಧೂಮರಹಿತ ತಂಬಾಕು ಬಳಕೆದಾರರಲ್ಲಿ ಶೇ.13.2 ಮಂದಿ ಮಾತ್ರ ತಂಬಾಕು ಉತ್ಪನ್ನದ ಪ್ಯಾಕಿನಲ್ಲಿನ ಚಿತ್ರ ಅಥವಾ ಎಚ್ಚರಿಕೆ ಬರಹದತ್ತ ಕಣ್ಣು ಹಾಯಿಸಿದ್ದಾರೆ. ಇದನ್ನೇ ಕೆನಡಾಕ್ಕೆ ಹೋಲಿಸಿದಾಗ ಅಲ್ಲಿ ಶೇ.91ರಷ್ಟು ಮಂದಿ ಗಮನಹರಿಸಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ವಿವರಣೆ ನೀಡಿರುವ ವೈದ್ಯ ಪ್ರಕಾಶ್ ಗುಪ್ತಾ, ಸಿಗರೇಟು ಪ್ಯಾಕುಗಳಲ್ಲಿ ಬಾಯಿಯ ಕ್ಯಾನ್ಸರ್ ಚಿತ್ರಗಳನ್ನು ಮುದ್ರಿಸಿದ ನಂತರ ಬ್ರೆಜಿಲ್ ಮತ್ತು ಮಾರಿಷಸ್‌ಗಳಂತಹ ದೇಶಗಳಲ್ಲಿ ಧೂಮಪಾನಿಗಳ ಸಂಖ್ಯೆ ಪರಿಣಾಮಕಾರಿಯಾಗಿ ಇಳಿಕೆಯಾಗಿದೆ. ಇದನ್ನು ಜಾರಿಗೆ ತಂದ ನಂತರ ಅಲ್ಲಿನ ಸಿಗರೇಟು ಕಂಪನಿಗಳು ಮಾರಾಟದಲ್ಲಿ ಕುಸಿತ ಅನುಭವಿಸಿರುವುದನ್ನು ಹೇಳಿಕೊಂಡಿವೆ ಎಂದಿದ್ದಾರೆ.

ಸರಕಾರವು ತಂಬಾಕು ಪೊಟ್ಟಣಗಳಲ್ಲಿ ಮೂರು ರೀತಿಯ ಚಿತ್ರಗಳನ್ನು ಬಳಸಲು ಆದೇಶಿಸಿದಂತೆ ಆ ಚಿತ್ರಗಳನ್ನು ಜನತೆಯ ಎದುರು ಇಟ್ಟು ಈ ಸಮೀಕ್ಷೆ ನಡೆಸಲಾಯಿತು. ಅದರ ಪ್ರಕಾರ ಬಹುತೇಕ ಮಂದಿ ಚಿತ್ರಗಳನ್ನು ನೋಡಿದ ನಂತರ ಧೂಮಪಾನದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅರ್ಧಕ್ಕಿಂತಲೂ ಕಡಿಮೆ ಮಂದಿ ಧೂಮಪಾನ ತ್ಯಜಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಇದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎನ್ನುವುದನ್ನು ಕಾಲವೇ ಹೇಳಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ