ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ 'ಸೆಕ್ಯುಲರ್' ಅಬ್ದುಲ್ ನಾಸಿರ್ ಮದನಿ ಯಾರು ಗೊತ್ತಾ? (Abdul Nasser Madani | Lashkar-e-Toiba | Peoples Democratic Party | Sufiya Madani)
Bookmark and Share Feedback Print
 
ಕೊಯಂಬತ್ತೂರು ಸ್ಫೋಟ ಪ್ರಕರಣ....
60 ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ 1998ರ ಕೊಯಂಬತ್ತೂರು ಸ್ಫೋಟ ಪ್ರಕರಣದಲ್ಲಿ ಮೊತ್ತ ಮೊದಲ ಬಾರಿ ಇಡೀ ರಾಷ್ಟ್ರದ ಗಮನ ಸೆಳೆದ ಮದನಿ, ಎಂಟು ವರ್ಷಗಳ ಕಾಲ ಯಾವುದೇ ವಿಚಾರಣೆ ಮತ್ತು ಜಾಮೀನಿಲ್ಲದೆ ಕೊಯಂಬತ್ತೂರು ಕಾರಾಗೃಹದಲ್ಲಿ ಕಳೆದಿದ್ದ.

ಆದರೆ ಆತನ ಮೇಲಿದ್ದ ಆರೋಪಗಳಿಗೆ ಯಾವುದೇ ಪ್ರಬಲ ಸಾಕ್ಷ್ಯಗಳು ಲಭ್ಯವಾಗದೇ ಇದ್ದ ಕಾರಣ 2007ರಲ್ಲಿ ಬಿಡುಗಡೆಯಾಗಿದ್ದ. ಬಿಜೆಪಿ ನೇತಾರ ಎಲ್.ಕೆ. ಅಡ್ವಾಣಿಯವರು ಕೊಯಂಬತ್ತೂರಿಗೆ ಬರುವ ಕೆಲವೇ ತಾಸುಗಳ ಮುಂಚೆ ಈ ಸ್ಫೋಟ ನಡೆದಿತ್ತು.

ಮತ್ತೊಂದು ಅಚ್ಚರಿಯ ವಿಚಾರವೆಂದರೆ 2006ರಲ್ಲಿ ಮದನಿ ಬಿಡುಗಡೆಗಾಗಿ ಕೇರಳ ವಿಧಾನಸಭೆ ಕಾಂಗ್ರೆಸ್ ಮತ್ತು ಬದ್ಧವಿರೋಧಿ ಎಡಪಕ್ಷಗಳ ಶಾಸಕ ಒಗ್ಗಟ್ಟಿನ 'ಅವಿರೋಧ' ಗೊತ್ತುವಳಿಯೊಂದನ್ನು ಅಂಗೀಕರಿಸಿದ್ದು. ಅದೂ 'ಮಾನವೀಯತೆ'ಯ ನೆಲೆಯಲ್ಲಿ. 2006ರ ಮಾರ್ಚ್ 16ರಂದು ಇಂತಹ ನಿರ್ಧಾರಕ್ಕೆ ಕೇರಳ ಬಂದಿತ್ತು.

ಬದಲಾಗುತ್ತೇನೆ ಎಂದಿದ್ದ...
ಬಿಡುಗಡೆಯಾದ ನಂತರ ಪ್ರತಿಕ್ರಿಯೆ ನೀಡಿದ್ದ ಮದನಿ, ತಾನು ಈ ಹಿಂದೆ ತಪ್ಪು ಹಾದಿಯಲ್ಲಿ ಹೋಗಿರುವುದು ಹೌದು, ಆದರೆ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾನು ಬದಲಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಧರ್ಮದ ಹಾದಿಯಲ್ಲಿ ನಡೆಯುತ್ತೇನೆ ಎಂದು ಭರವಸೆ ನೀಡಿದ್ದ.

ಆದರೆ ಸ್ವತಃ ಜೈಲಿನಲ್ಲಿದ್ದ ಹೊತ್ತಿನಲ್ಲೇ, ಆತ ತನ್ನ ನಿಷೇಧಿತ ಐಎಸ್ಸೆಸ್ ಸಂಘಟನೆಯ ಕಾರ್ಯಕರ್ತ ಹಾಗೂ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ
ಟಿ. ನಜೀರ್ ಜತೆ ಸಂಪರ್ಕದಲ್ಲಿದ್ದ. ಇದನ್ನು ಬಿಡುಗಡೆಯ ನಂತರವೂ ಮುಂದುವರಿಸಿ, ಇದೀಗ ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನು ನಜೀರ್ ಮತ್ತು ಇನ್ನೊಬ್ಬ ಉಗ್ರಗಾಮಿ ಸರ್ಫರಾಜ್ ನವಾಜ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದರು.

ಪತ್ನಿಯ ಕಥೆಯೂ ಭಿನ್ನವಲ್ಲ...
ಮದನಿಯ ಪತ್ನಿ ಸೂಫಿಯಾ ಮದನಿ ಕೂಡ ಮೂಲಭೂತವಾದಿ ತತ್ವಗಳನ್ನೇ ಅನುಸರಿಸಿದವಳು. ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಜತೆ ಹೊಂದಿದ್ದ ಸಂಬಂಧ ಮತ್ತು ಟಿ. ನಜೀರ್ ರೂಪಿಸಿದ್ದ ಕಲಮಶ್ಶೇರಿ ಬಸ್ ಸುಟ್ಟ ಪ್ರಕರಣದಲ್ಲಿ ಈಕೆಯನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರು ಸ್ಫೋಟ ಪ್ರಕರಣದಲ್ಲೂ ಈಕೆಯ ಪಾತ್ರವಿದೆ ಎಂದು ಹೇಳಲಾಗಿದೆ.

ಮದನಿ ಕೊಯಂಬತ್ತೂರು ಜೈಲಿನಲ್ಲಿದ್ದ ಸಂದರ್ಭದಲ್ಲಿ, ಆತನಿಗೆ ಸರಿಯಾದ ಉಪಚಾರ ನೀಡುತ್ತಿಲ್ಲ ಎಂಬುದನ್ನು ವಿರೋಧಿಸಿ ಪ್ರತೀಕಾರ ತೀರಿಸಿಕೊಳ್ಳಲು ಸೂಫಿಯಾ ಬಸ್ಸೊಂದಕ್ಕೆ ಬೆಂಕಿ ಹಚ್ಚುವ ನಿರ್ಧಾರಕ್ಕೆ ಬಂದಿದ್ದಳು. ಕೊಯಂಬತ್ತೂರು ಪ್ರೆಸ್ ಕ್ಲಬ್ ಬಳಿಯಿದ್ದ ತಮಿಳುನಾಡು ಸರಕಾರಿ ಬಸ್ಸಿಗೆ 2005ರ ಸೆಪ್ಟೆಂಬರ್ 9ರಂದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸೂಫಿಯಾ ಮಹತ್ವದ ಪಾತ್ರವಹಿಸಿದ್ದಾಳೆಂದು 2009ರ ಡಿಸೆಂಬರ್ 19ರಂದು ಕೇರಳ ಪೊಲೀಸರು ಬಂಧಿಸಿದ್ದರು.

ನಂತರ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತನ್ನ ಗಂಡನ ಅನಾರೋಗ್ಯ ಮತ್ತು ರಂಜಾನ್ ಕಾರಣಗಳನ್ನು ಮುಂದಿಟ್ಟು ಜಾಮೀನು ವಿಸ್ತರಿಸುವಂತೆ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಳು. ಅದರಂತೆ ಇತ್ತೀಚೆಗಷ್ಟೇ ಷರತ್ತುಬದ್ಧ ವಿನಾಯಿತಿಯನ್ನು ನ್ಯಾಯಾಲಯ ನೀಡಿತ್ತು.

ವರದಿಗಳ ಪ್ರಕಾರ ಕರ್ನಾಟಕ ಪೊಲೀಸರು ಸೂಫಿಯಾಳನ್ನೂ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಬೆಂಗಳೂರು ಸ್ಫೋಟ....
2008ರ ಜುಲೈ 25ರಂದು ಬೆಂಗಳೂರಿನ ವಿವಿಧೆಡೆ ಒಂಬತ್ತು ಬಾಂಬ್‌ಗಳು ಒಂದರ ಹಿಂದೊಂದರಂತೆ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, 20 ಮಂದಿ ಗಾಯಗೊಂಡಿದ್ದರು.

ಇದರ ಹಿಂದೆ ಮತ್ತೊಂದು ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಮಿ ಮತ್ತು ಲಷ್ಕರ್ ಕೈವಾಡವಿದೆ ಎಂದು ಪೊಲೀಸರು ಹೇಳುತ್ತಾ ಬಂದಿದ್ದರು. ಇದಕ್ಕೆ ಮತ್ತಷ್ಟು ಪುಷ್ಠಿ ದೊರೆತದ್ದು 2009ರ ಡಿಸೆಂಬರ್ ತಿಂಗಳಲ್ಲಿ. ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ರಕ್ಷಣಾ ಪಡೆಗಳಿಗೆ ಲಷ್ಕರ್ ದಕ್ಷಿಣ ಭಾರತದ ಕಮಾಂಡರ್ ತಡಿಯಂಡವಿಡೆ ನಜೀರ್ ಸಿಕ್ಕಿ ಬಿದ್ದಿದ್ದ.

ಮದನಿ ಸೇರಿದಂತೆ ಕೇರಳದ ಹಲವರು ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿದ್ದಾರೆ, ಕೇರಳದಲ್ಲಿ ಭಯೋತ್ಪಾದಕರ ಗುಪ್ತದಳಗಳು ಸಕ್ರಿಯವಾಗಿವೆ ಎಂಬುದನ್ನು ನಜೀರ್ ಬಹಿರಂಗಪಡಿಸಿದ್ದ.

ಬೆಂಗಳೂರು ಹೊರವಲಯದಲ್ಲಿ ಶುಂಠಿ ಕೃಷಿ ಮಾಡುವ ನೆಪದಲ್ಲಿ ತಳವೂರಿದ್ದ ನಜೀರ್‌ನನ್ನು ಮದನಿ ಭೇಟಿ ಮಾಡಿರುವ ವಿಚಾರವೂ ಈ ಮೂಲಕ ಬೆಳಕಿಗೆ ಬಂದಿತ್ತು. ಆದರೆ ಈ ಎಲ್ಲಾ ಆರೋಪಗಳನ್ನು ಮದನಿ ತಳ್ಳಿ ಹಾಕುತ್ತಾ ಬಂದಿದ್ದಾನೆ.

ರಾಜಕಾರಣಿಗಳಿಗೆ ಅಚ್ಚುಮೆಚ್ಚು....
ಇಷ್ಟೆಲ್ಲ ಆರೋಪಗಳನ್ನು ಹೊತ್ತಿದ್ದರೂ, ಮದನಿಯೆಂದರೆ 'ಜಾತ್ಯತೀತ' ಸೋಗಿನಲ್ಲಿರುವ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಅಚ್ಚುಮೆಚ್ಚು. ಈತನನ್ನು ಒಲಿಸಿಕೊಂಡರೆ ಮುಸ್ಲಿಮರ ಓಟನ್ನು ಸುಲಭವಾಗಿ ಬಾಚಿಕೊಳ್ಳಬಹುದು ಎನ್ನುವುದು ಪಕ್ಷಗಳ ಯೋಚನೆ.

'ಜಾತ್ಯತೀತ'ನೆಂದು ಪೋಸು ಕೊಡುತ್ತಾ, ಒಳಗಿಂದೊಳಗೆ ಮೂಲಭೂತವಾದಿ ವಿಚಾರಗಳಿಗೆ ಪ್ರೋತ್ಸಾಹ ನೀಡುವ ಆತನ ಪಿಡಿಪಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಹಲವು ಪಕ್ಷಗಳು ತುದಿಗಾಲಲ್ಲಿ ನಿಂತಿರುತ್ತವೆ. ಅಬ್ದುಲ್ ನಾಸಿರ್ ಮದನಿ -- ಈ ಮೂರು ಪದಗಳ ಹೆಸರಿನ ಹಿಂದೆ ಅದೆಷ್ಟು ಬೆಂಬಲಿಗರಿದ್ದಾರೆ, ಅದೆಷ್ಟು ರಾಜಕೀಯ ಪಕ್ಷಗಳು ಒಲವು ಗಿಟ್ಟಿಸಲು ಯತ್ನಿಸುತ್ತಿವೆ ಎಂದರೆ ಚುನಾವಣೆ ಬಂದಾಗಲೆಲ್ಲ ಆತನ ಮನೆಯ ಮುಂದೆ ಜಮಾಯಿಸುವ ಸಾಲು-ಸಾಲು ಕಾರುಗಳೇ ಸಾಕ್ಷಿ.

ಕೊಯಂಬತ್ತೂರು ಬಾಂಬ್ ಸ್ಫೋಟದ ನಂತರ ಈತನ ಪಿಡಿಪಿ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದ್ದರೂ, ನಿರಪರಾಧಿ ಎಂದು ಬಿಡುಗಡೆಯಾದ ನಂತರ ಮತ್ತೆ ಚೇತರಿಕೆ ಕಂಡಿದೆ. ಇದನ್ನು ಅಪಾಯಕಾರಿ ಸಂಕೇತ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲಾಗುತ್ತಿದೆ.

ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಇದು ಫಲ ಕೊಟ್ಟಿರಲಿಲ್ಲ. ಸಿಪಿಐಎಂ ಮತ್ತು ಮದನಿಯ ಪಿಡಿಪಿ ಸೇರಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿಕೂಟ ಅಸ್ತಿತ್ವಕ್ಕೆ ತಂದು ಮುಸ್ಲಿಮರ ಓಟ್ ಬ್ಯಾಂಕನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದರೂ, ಸ್ವತಃ ಮದನಿ ಸಿಪಿಎಂ ಘಟಾನುಘಟಿ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡು ಭಾಷಣ ಮಾಡಿದ್ದರು, ಈ ಕೂಟವು 20 ಸೀಟುಗಳಲ್ಲಿ ಕೇವಲ ನಾಲ್ಕನ್ನು ಗೆದ್ದು ನಿರಾಸೆ ಅನುಭವಿಸಿತ್ತು.
 
ಸಂಬಂಧಿತ ಮಾಹಿತಿ ಹುಡುಕಿ