ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಲು ತೂರಾಟಗಾರರಿಗೇ ಕಲ್ಲುತೂರಾಟ; ಇದು ತಿರುಮಂತ್ರ (protesters | Kashmir | shopkeepers | stone pelting)
Bookmark and Share Feedback Print
 
ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟದಲ್ಲಿ ನಿರತರಾಗಿರುವ ಪ್ರತ್ಯೇಕತಾವಾದಿಗಳ ವಿರುದ್ಧ ಸ್ಥಳೀಯರು ಪ್ರತಿದಾಳಿ ಆರಂಭಿಸಿದ್ದಾರೆ. ಮಿತಿಮೀರುತ್ತಿರುವ ಪ್ರತಿಭಟನೆಗಳಿಂದ ಭಾರೀ ನಷ್ಟ ಅನುಭವಿಸಿರುವ ವ್ಯಾಪಾರಸ್ಥರು ಮತ್ತು ಸ್ಥಳೀಯರು ತಾವೂ ಕಲ್ಲುಗಳನ್ನು ಕೈಗೆ ತೆಗೆದುಕೊಳ್ಳುವ ಮೂಲಕ ದುಷ್ಕರ್ಮಿಗಳಿಗೆ ತಿರುಗೇಟು ನೀಡುತ್ತಿದ್ದಾರೆ.

ಪ್ರತ್ಯೇಕತಾವಾದಿಗಳ ಬೆಂಬಲದಿಂದ ನಡೆಯುತ್ತಿರುವ ನಿರಂತರ ಕಲ್ಲು ತೂರಾಟದಿಂದ ಬೇಸತ್ತಿರುವ ಅಂಗಡಿವಾಲಾಗಳು ಪರಿಸ್ಥಿತಿ ಹಿಂದಿನಂತೆ ಆಗಬೇಕೆಂದು ಬಯಸುತ್ತಿದ್ದಾರೆ. ತಮಗಾಗಿರುವ ನಷ್ಟಕ್ಕೆ ಪ್ರತಿಭಟನಾಕಾರರೇ ಕಾರಣ ಎಂದು ಅವರು ಜರೆಯುತ್ತಿದ್ದಾರೆ.
PTI

ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಶಾಂತಿ ನೆಲೆಗೊಳಿಸಬೇಕೆಂದು ಕಣಿವೆ ರಾಜ್ಯದ ಧಾರ್ಮಿಕ ಮುಖಂಡರು ಕೂಡ ಸತತ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಶುಕ್ರವಾರ ಮಸೀದಿಗಳಿಗೆ ಪ್ರಾರ್ಥನೆಗೆಂದು ಜನತೆ ಬರುವಾಗ ಮೌಲ್ವಿಗಳು ಮನವಿ ಮಾಡುತ್ತಿದ್ದಾರೆ.

ಕೇಂದ್ರ ಕಾಶ್ಮೀರದ ಬಗ್ದಾಮ್ ಜಿಲ್ಲೆಯ ಪೀರ್ಬಾಗ್ ಎಂಬಲ್ಲಿ ಇತ್ತೀಚೆಗಷ್ಟೇ ಹಿಂಸಾಚಾರ ಭುಗಿಲೆದ್ದಿತ್ತು. ಪ್ರತ್ಯೇಕತಾವಾದಿಗಳು ಮತ್ತು ಅವರ ಗೂಂಡಾಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಬೆನ್ನಿಗೆ ಎಂದಿನಂತೆ ಕಲ್ಲು ತೂರಾಟಕ್ಕೂ ಇಳಿದರು. ಸ್ಥಳೀಯ ಅಂಗಡಿಗಳ ಮೇಲೂ ಪ್ರತಿಭಟನಾಕಾರರು ಕಲ್ಲೆಸೆಯಲಾರಂಭಿಸಿದರು.

ಈ ಹೊತ್ತಿಗೆ ಕುಪಿತಗೊಂಡ ಸ್ಥಳೀಯ ಅಂಗಡಿಗಳ ಮಾಲೀಕರು ತಾವೂ ಕಲ್ಲುಗಳನ್ನು ಕೈಗೆತ್ತಿಕೊಂಡು ಪ್ರತಿದಾಳಿ ನಡೆಸಿದರು. ಆ ಮೂಲಕ ಪೋಕರಿ ಕೆಲಸದಲ್ಲಿ ನಿರತರಾಗಿದ್ದ ಯುವಕರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರು.

ಎರಡು ಗುಂಪುಗಳ ನಡುವೆ ಈ ರೀತಿಯಾಗಿ ಸಂಘರ್ಷ ನಡೆಯುತ್ತಿದ್ದಾಗ ಪೊಲೀಸರು ಏನೂ ಮಾಡದ ಸ್ಥಿತಿಗೆ ತಲುಪಿದ್ದರು. ಇದ್ದ ಬೆರಳೆಣಿಕೆಯ ಭದ್ರತಾ ಸಿಬ್ಬಂದಿಗಳ ಕೈ ಕಟ್ಟಿ ಹಾಕಿದ ಸ್ಥಿತಿ ಅಲ್ಲಿ ನೆಲೆಗೊಂಡಿದ್ದೇ ಇದಕ್ಕೆ ಕಾರಣ.

ಇಷ್ಟಕ್ಕೇ ಬಿಡದ ಅಂಗಡಿ ಮಾಲೀಕರು ಮತ್ತು ಸ್ಥಳೀಯರು ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರನ್ನೂ ನೀಡಿದ್ದಾರೆ. ಪಕ್ಕದ ನಬೀರ್ ಗಂಡ್ ಗ್ರಾಮದ 10 ಮಂದಿ ಶಾಂತಿ ಕದಡುವುದು ಮತ್ತು ಸ್ಥಳೀಯರಿಗೆ ಬೆದರಿಕೆ ಹಾಕುವುದನ್ನು ಮಾಡುತ್ತಿದ್ದಾರೆ ಎಂದು ಅವರು ಎಫ್ಐಆರ್ ದಾಖಲಿಸಿದ್ದಾರೆ.

ಇಲ್ಲಿಂದ ತುಂಬಾ ದೂರದಲ್ಲಿರುವ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ರಂಜಾನ್ ಪವಿತ್ರ ತಿಂಗಳಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆಯುವಂತೆ ಮನವಿಗಳನ್ನು ಮಾಡಿಕೊಂಡಿದ್ದರೂ, ನಿರಂತರ ಪ್ರತಿಭಟನೆಗಳಿಂದಾಗಿ ಕಷ್ಟದ ಪರಿಸ್ಥಿತಿ ಎದುರಾಗುತ್ತಿದೆ.

ಪ್ರತ್ಯೇಕತಾವಾದಿಗಳ ಬಂದ್ ಕರೆಗಳಿಂದಾಗಿ ಆರ್ಥಿಕತೆಯಂತೂ ನೆಲಮಟ್ಟಕ್ಕಿಳಿದಿದೆ. ಸ್ಥಳೀಯ ಹಲವು ಮಂದಿ ತಮ್ಮ ಆಸ್ತಿ-ಪಾಸ್ತಿಗಳನ್ನು ಅತೀ ಕಡಿಮೆ ಬೆಲೆಗಳಿಗೆ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದೂ ಸಾಮಾನ್ಯವಾಗುತ್ತಿದೆ.

ಈ ರೀತಿ ತುಂಬಾ ದಿನ ಬಾಳ್ವೆ ನಡೆಸುವುದು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿಯು ಮೊದಲಿನಂತಾಗಬೇಕೆಂದು ಜನತೆ ಪ್ರತಿಭಟನಾಕಾರರ ವಿರುದ್ಧವೇ ತಿರುಗಿ ಬೀಳುತ್ತಿರುವ ಪ್ರಸಂಗಗಳು ಕೇಳಿ ಬರುತ್ತಿವೆ. ಈ ರೀತಿ ಹಿಂಸಾಪೂರಿತ ಪ್ರತಿಭಟನೆಗೆ ಪ್ರಬಲ ವಿರೋಧ ಬಂದ ನಂತರವಷ್ಟೇ ಶಾಂತಿಯುತ, ಗೌರವಯುತ ಜೀವನ ಸಾಗಿಸಲು ಸಾಧ್ಯ ಎಂದು ಜನತೆಗೆ ಮನಗಂಡ ದಿನ ಎಲ್ಲವೂ ಸರಿಯಾಗಬಹುದು ಎಂದಷ್ಟೇ ಈ ನಿರೀಕ್ಷಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ