ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಮಾಣು ಕಾಯ್ದೆ; ವಿಪಕ್ಷಗಳ ಬೆನ್ನು ಬಿದ್ದಿರುವ ಕೇಂದ್ರ
(BJP | Nuclear Liability Bill | Prithviraj Chavan | Arun Jaitley)
ಪರಮಾಣು ಬಾಧ್ಯತಾ ಕಾಯ್ದೆಯಲ್ಲಿನ ಕೆಲವು ನಿಬಂಧನೆಗಳು ವಿದೇಶಿ ಪೂರೈಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ ಎಂಬ ವಿಪಕ್ಷಗಳ ತೀವ್ರ ವಿರೋಧವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮನವೊಲಿಕೆಯಲ್ಲಿ ತೊಡಗಿದ್ದು, ಎಡಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸುವ ಭರವಸೆ ನೀಡಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾನ್ ಅವರ ಜತೆ ಗಂಟೆಯಷ್ಟು ಕಾಲ ನಡೆದ ಮಾತುಕತೆಯ ನಂತರ ಸಿಪಿಐಎಂ ಪ್ಯಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ ಇದನ್ನು ತಿಳಿಸಿದ್ದಾರೆ.
ಮಸೂದೆಯ ಕುರಿತಾದ ನಮ್ಮ ಭಿನ್ನಮತಗಳನ್ನು, ಅದರಲ್ಲೂ ಪೂರೈಕೆದಾರರ ಹೊಣೆಗಾರಿಕೆಗೆ ಸಂಬಂಧಿಸಿದ ವಿಧಿಗಳ ಕುರಿತು ಗಮನ ಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆದರೆ ಪ್ರಸ್ತಾವಿತ ಮಸೂದೆಯಲ್ಲಿ ಇಂತಹ ಬದಲಾವಣೆಗಳು ಕಂಡ ಮೇಲಷ್ಟೇ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಯೆಚೂರಿ ವಿವರಣೆ ನೀಡಿದ್ದಾರೆ.
ನಾಳೆ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಮಸೂದೆ ಬಗ್ಗೆ ನಡೆದಿರುವ ಚರ್ಚೆ ಸಂದರ್ಭದಲ್ಲಿ ಎಡಪಕ್ಷಗಳು ಸೂಚಿಸಿರುವ ಅಗತ್ಯ ತಿದ್ದುಪಡಿಗಳನ್ನು ಸರಕಾರ ಪರಿಗಣಿಸಲಿದೆ. ಕ್ರಿಮಿನಲ್ ಬಾಧ್ಯತೆಯ ಜಾಗಕ್ಕೆ ಸಿವಿಲ್ ಬಾಧ್ಯತೆಯನ್ನು ತರಲಾಗುವುದಿಲ್ಲ. ದೇಶದ ಕಾನೂನು ಜಾರಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಸಿಪಿಐಎಂ ನಾಯಕ ತಿಳಿಸಿದ್ದಾರೆ.
ಮಸೂದೆಯ ಕುರಿತ ಎಡಪಕ್ಷಗಳ ಅಭಿಪ್ರಾಯಗಳನ್ನು ತಾನು ಸಚಿವರಲ್ಲಿ ಹೇಳಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸರಕಾರವು ಸಿದ್ಧಪಡಿಸಿರುವ ಮಸೂದೆಯಲ್ಲಿನ ಅಂಶಗಳು ಸದನದ ಸ್ಥಾಯಿ ಸಮಿತಿಯು ಮಾಡಿದ್ದ ಮಹತ್ವದ ಶಿಫಾರಸುಗಳ ವಿರುದ್ಧವಾಗಿದೆ ಎಂದು ಹೇಳುತ್ತಿರುವ ಎಡಪಕ್ಷಗಳು, ವಿದೇಶಿ ಪೂರೈಕೆದಾರರನ್ನು ರಕ್ಷಿಸುವ ವಿಧಿಗಳನ್ನು ಮಸೂದೆಯಲ್ಲಿ ಅಳವಡಿಸಲಾಗಿದೆ; ಅವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತಾ ಬಂದಿವೆ.