ಈ ಹಿಂದೆ ಹಲವು ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆಯಿರುವುದು ಕಂಡು ಬಂದಿದೆ. ಇದನ್ನು ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು ಸಮಯೋಚಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹೇಳಿದೆ.
ಆಂತರಿಕ ಭದ್ರತೆ ಕುರಿತು ಬುಧವಾರ ರಾಜಧಾನಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಭಯೋತ್ಪಾದನೆಯ ನೂತನ ಪ್ರಕಾರವಾಗಿರುವ ಕೇಸರಿ ಭಯೋತ್ಪಾದನೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ ಎಂದರು.
ಈ ಹಿಂದೆ ನಡೆದ ಹಲವು ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆಯು ಪಾತ್ರವಹಿಸಿರುವುದು ನಡೆಯುತ್ತಾ ಬಂದಿದೆ. ಹಾಗಾಗಿ ಒಟ್ಟಾರೆ ಭಯೋತ್ಪಾದನೆಯನ್ನು ಹತ್ತಿಕ್ಕಲು ನಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಿರಂತರ ಕಾರ್ಯಾಚರಣೆ ಮುಂದುವರಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಭಯೋತ್ಪಾದನಾ ಚಟುವಟಿಕೆಗಳಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಪಾಲ್ಗೊಂಡಿವೆ ಎಂಬುದನ್ನು ನೇರವಾಗಿಯೇ ಆರೋಪಿಸಿದ ಚಿದಂಬರಂ, ಭಾರತದ ಯುವಕ-ಯುವತಿಯರನ್ನು ಮೂಲಭೂತವಾದಿಗಳನ್ನಾಗಿಸುವ ಯಾವುದೇ ಯತ್ನಕ್ಕೂ ಅವಕಾಶ ನೀಡಬಾರದು ಎಂದು ಐಜಿಪಿ-ಡಿಜಿಪಿಗಳಿಗೆ ಸಲಹೆ ನೀಡಿದರು.
ಉಗ್ರರ ಅಟ್ಟಹಾಸದಿಂದ ಮುಕ್ತ... ಕಳೆದ 21 ತಿಂಗಳುಗಳಲ್ಲಿ ಯಾವುದೇ ಮಹತ್ವದ ವಿದ್ವಂಸಕ ಕೃತ್ಯಗಳು ದೇಶದಲ್ಲಿ ನಡೆದಿಲ್ಲ ಎಂದಿರುವ ಸಚಿವರು, ಈ ಅವಧಿಯಲ್ಲಿ ನೆಲೆಗೊಂಡಿರುವ ಆಂತರಿಕ ಭದ್ರತೆಯ ಕುರಿತು ಸಂತೃಪ್ತಿ ವ್ಯಕ್ತಪಡಿಸಿದರು.
ಆದರೆ ಅದೇ ಹೊತ್ತಿಗೆ ಭಯೋತ್ಪಾದಕರ ಒಳನುಸುಳುವಿಕೆಯ ಯತ್ನಗಳು ಕೊನೆಗೊಂಡಿಲ್ಲ, ಅದು ಮುಂದುವರಿದಿದೆ ಎಂದು ಅವರು ಆತಂಕವನ್ನೂ ತೋಡಿಕೊಂಡಿದ್ದಾರೆ.
ನಕ್ಸಲ್ ಸಮಸ್ಯೆ ಕುರಿತು ಮಾತಿಗಿಳಿದ ಸಚಿವರು, ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಪಡೆಗಳನ್ನು ಬಲಗೊಳಿಸಬೇಕಾಗಿದ್ದು, ಈ ಸಂಬಂಧ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕಗೊಳಿಸುವ ಇರಾದೆ ಸರಕಾರಕ್ಕಿದೆ. ಶಾಂತಿ ಮಾತುಕತೆಗಾಗಿ ಸರಕಾರ ನೀಡಿರುವ ಆಹ್ವಾನಕ್ಕೆ ನಕ್ಸಲರಿಂದ ಇದುವರೆಗೆ ಯಾವುದೇ ರೀತಿಯ ಸಮರ್ಥನೀಯ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರತಿಕ್ರಿಯೆ ಬಂದಿಲ್ಲ ಎಂದರು.