ಗಿರ್ ಅಭಯಧಾಮದ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಗುಜರಾತ್‌ನ ಬಿಜೆಪಿ ಸಂಸದ ದಿನು ಸೋಲಂಕಿ ಸಂಬಂಧ ಹೊಂದಿರುವುದು ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಟಿವಿ ಚಾನೆಲ್‌ವೊಂದು ವರದಿ ಮಾಡಿದೆ.
ಅಕ್ರಮ ಗಣಿಗಾರಿಕೆಯಲ್ಲಿ ಕೇವಲ ಸೋಲಂಕಿ ಮಾತ್ರ ಸಂಬಂಧ ಹೊಂದಿರುವುದು ಬಹಿರಂಗವಾಗಿರುವುದಲ್ಲ, ಜತೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೂ ಇದರ ಅರಿವಿದೆ ಎಂದು ವರದಿಯೊಂದು ಹೇಳಿದೆ.
ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಕೊಲೆ ಪ್ರಕರಣದ ಶಂಕಿತ ಆರೋಪಿ ಸೋದರ ಮಾವನಾಗಿರುವ ದಿನು ಸೋಲಂಕಿಯವರಿಗೆ 2004ರ ಜನವರಿಯಲ್ಲಿ ಗಣಿಗಾರಿಕೆ ಗುತ್ತಿಗೆ ನೀಡಲಾಗಿತ್ತು. ಈ ಕುರಿತು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಜೇತ್ವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ ನಂತರ ಅವರನ್ನು ಗುಂಡಿಕ್ಕಿ ಕೊಂದು ಹಾಕಲಾಗಿತ್ತು.
ಅಭಯಧಾಮದ ಐದು ಕಿಲೋ ಮೀಟರ್ ವ್ಯಾಪ್ತಿಯ ನಿಷೇಧಿತ ವಲಯದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಿ ಪರವಾನಗಿ ರದ್ದುಪಡಿಸಿಕೊಂಡ ಕಂಪನಿಗಳ ಪಟ್ಟಿಯಲ್ಲೂ ಸೋಲಂಕಿಯವರ ಗುತ್ತಿಗೆ ಸ್ಥಾನ ಪಡೆದಿತ್ತು. ಇಂತಹ 35 ಗುತ್ತಿಗೆಗಳ ಪಟ್ಟಿಯಲ್ಲಿ ಸೋಲಂಕಿಯವರ ಗುತ್ತಿಗೆ 10ನೇ ಸ್ಥಾನದಲ್ಲಿತ್ತು.
ಅಲ್ಲದೆ ಅಕ್ರಮ ಗಣಿಗಾರಿಕೆಯ ಆರೋಪ ಬಂದಾಗ, ಈ ಕುರಿತು ಗಮನ ಹರಿಸುತ್ತೇನೆ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರು ಹೇಳಿರುವ ಪತ್ರವೊಂದೂ ಲಭಿಸಿದೆ. ಗುಜರಾತಿನ ಕಾಂಗ್ರೆಸ್ ಶಾಸಕರೊಬ್ಬರು ದೂರು ನೀಡಿದ್ದಕ್ಕೆ ಈ ಉತ್ತರವನ್ನು ಮುಖ್ಯಮಂತ್ರಿ ನೀಡಿದ್ದರು.
ಅದೇ ಹೊತ್ತಿಗೆ ಅತ್ತ ಕೇಂದ್ರ ಸರಕಾರವು ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಲು ಆಯೋಗವೊಂದನ್ನು ಅಸ್ತಿತ್ವಕ್ಕೆ ತರಲು ಸಿದ್ಧತೆ ನಡೆಸುತ್ತಿದೆ. ಅತಿ ಹೆಚ್ಚು ಗಣಿಗಾರಿಕೆಯಿಂದ ನಲುಗುತ್ತಿರುವ ರಾಜ್ಯಗಳಾದ ಕರ್ನಾಟಕ, ಒರಿಸ್ಸಾ ಮತ್ತು ಆಂಧ್ರಪ್ರದೇಶಗಳ ಅಕ್ರಮ ಗಣಿಗಾರಿಕೆಗಳನ್ನು ಇದು ತನಿಖೆ ನಡೆಸಲಿದೆ.