ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವ ವಾಸ್ತವ ಕಾರಣವು ಅಪರಾಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತಾಗಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಕಾಶ್ಮೀರದಲ್ಲಿನ ಉದ್ವಿಗ್ನತೆ, ಮಾವೋವಾದಿಗಳ ಹಿಂಸಾಚಾರ ಮತ್ತು ಕ್ರಿಮಿನಲ್ ಚಟುವಟಿಕೆಗಳಂತಹ ವ್ಯೂಹಾತ್ಮಕ ಬೆದರಿಕೆಗಳು ರಾಷ್ಟ್ರೀಯ ಭದ್ರತೆಗೆ ಸವಾಲಾಗಿ ಪರಿಣಿಸಿದೆ ಎಂದರು.
ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಪ್ರಾದೇಶಿಕ, ಭಾಷಾ ಮತ್ತು ಜನಾಂಗೀಯ ಭಿನ್ನತೆಗಳು ಮುಂತಾದುವು ಪೊಲೀಸರಿಗೆ ಎದುರಾಗುತ್ತಿರುವ ಸಮಸ್ಯೆಗಳು. ಇದಕ್ಕೆ ಮತ್ತಷ್ಟು ಸೇರ್ಪಡೆಯಾಗಿರುವುದು ಹೆಚ್ಚುತ್ತಿರುವ ದುಷ್ಕರ್ಮಿಗಳು, ಮೂಲಭೂತವಾದಿ ಸಂಘಟನೆಗಳು ಮತ್ತು ಎಡಪಂಥೀಯ ತೀವ್ರವಾದಿಗಳು ಎಂದು ಪ್ರಧಾನಿ ಸಿಂಗ್ ಅಭಿಪ್ರಾಯಪಟ್ಟರು.
2003ರ ನಂತರ ಪ್ರತಿವರ್ಷ ಭಾರತದ ಆರ್ಥಿಕತೆಯು ಶೇ.7ರಿಂದ 9ರಷ್ಟು ಪ್ರಗತಿ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಐಷಾರಾಮಿ ವ್ಯಾಪಾರಿ ಮಳಿಗೆಗಳು ಮತ್ತು ನೂತನ ವಸತಿ ನಿರ್ಮಾಣಗಳು ಎಂದರು.
ಅದೇ ಹೊತ್ತಿಗೆ ಆಫ್ರಿಕಾದ ದಕ್ಷಿಣ ಮರುಭೂಮಿ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿರುವ ಅಪೌಷ್ಠಿಕತೆ ಕುರಿತೂ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಶೇ.43.5ರಷ್ಟು ಐದರೊಳಗಿನ ಮಕ್ಕಳು ಪ್ರಸಕ್ತ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.
ಬಡ ರೈತರಿಂದ ಹೆಚ್ಚಿನ ಬೆಂಬಲ ಪಡೆದುಕೊಳ್ಳುತ್ತಿರುವ ನಕ್ಸಲ್ ಬಂಡುಕೋರರನ್ನು ಮಟ್ಟ ಹಾಕಲು ತೀವ್ರವಾದಿಗಳಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಮಾಡುವ ದಾರಿಯೇ ಉತ್ತಮ ಎಂದಿರುವ ಅವರು, ಬಂಡುಕೋರರು ನಮ್ಮದೇ ಜನರು ಎಂಬ ಉದಾರಿತನವನ್ನೂ ತೋರಿಸಿದ್ದಾರೆ. ಅಲ್ಲದೆ ಈ ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಯತ್ನಗಳ ಅಗತ್ಯವಿದೆ, ಇದಕ್ಕೆ ಸರಕಾರ ಬದ್ಧವಾಗಿದೆ ಎಂದಿದ್ದಾರೆ.
ಮಾವೋವಾದಿಗಳು ರಾಜ್ಯ ಮತ್ತು ದೇಶದ ಕಾನೂನುಗಳನ್ನು ಧಿಕ್ಕರಿಸಿ, ಬುಡಕಟ್ಟು ಪ್ರದೇಶಗಳ ಜನರ ಒಲವು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ದಾಳಿಗಳಿಗೆ ಪೊಲೀಸರು ಮತ್ತ ಅರೆಸೇನಾಪಡೆಗಳನ್ನು ಗುರಿಪಡಿಸುತ್ತಿದ್ದಾರೆ. ಇವರ ಬಲ ಕುಗ್ಗಿಸುವ ಮೂಲಕ ನಾವು ಮುಂದುವರಿಯುವುದು ಮುಖ್ಯವಾಗಿದೆ ಎಂದು ಸಿಂಗ್ ತಿಳಿಸಿದರು.