ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಂಕಿತ ನಕ್ಸಲ್ ಜತೆ ವೇದಿಕೆ ಹಂಚಿಕೊಂಡ ರಾಹುಲ್ ಗಾಂಧಿ!? (Rahul Gandhi | Dongria Kondh | Congress | Lado Sikoka)
Bookmark and Share Feedback Print
 
ಪ್ರಧಾನ ಮಂತ್ರಿ ಪಟ್ಟದ ಬೆನ್ನು ಹತ್ತಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನಿನ್ನೆ ಒರಿಸ್ಸಾದ ಬುಡಕಟ್ಟು ಪ್ರದೇಶವೊಂದರಲ್ಲಿ ನಡೆಸಿದ ರ‌್ಯಾಲಿಯಲ್ಲಿ ಶಂಕಿತ ನಕ್ಸಲ್ ನಾಯಕನೊಬ್ಬನ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಆರೋಪಗಳು ಬಂದಿರುವ ಬೆನ್ನಿಗೆ, ಕೇಂದ್ರ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಇದನ್ನೂ ಓದಿ: ಬುಡಕಟ್ಟು ಜನರ ದೆಹಲಿಯಲ್ಲಿನ ಯೋಧ ನಾನು: ರಾಹುಲ್

ಪೊಲೀಸರಲ್ಲಿರುವ ಶಂಕಿತ ಮಾವೋವಾದಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 38ರ ಹರೆಯದ ಲಾಡೋ ಸಿಕೋಕಾ ಎಂಬಾತನೇ ರಾಹುಲ್ ಗಾಂಧಿ ಜತೆ ವೇದಿಕೆಯಲ್ಲಿ ಸ್ಥಾನ ಪಡೆದವನು. ಸ್ಥಳೀಯ ಡೊಂಗ್ರಿಯಾ ಕಾಂಡ್ ಸಮುದಾಯದ ನಾಯಕನಾಗಿರುವ ಈತ ನಕ್ಸಲರ ಜತೆ ಗುರುತಿಸಿಕೊಂಡಿದ್ದರ ಕುರಿತು ಕಾಂಗ್ರೆಸ್ ನಾಯಕನಿಗೆ ಮಾಹಿತಿಯಿತ್ತೋ, ಅಥವಾ ಇಲ್ಲವೋ ಎಂಬುದು ಖಚಿತವಾಗಿಲ್ಲ.

ನಿಯಮಗಿರಿ ಹಿಲ್ಸ್‌ನಲ್ಲಿ ವೇದಾಂತ ರಿಸೋರ್ಸಸ್ ಸಮೂಹದ ಬಾಕ್ಸೈಟ್ ಗಣಿಗಾರಿಕೆಯನ್ನು ವಿರೋಧಿಸುವಲ್ಲಿ ಪ್ರಮುಖ ಬುಡಕಟ್ಟು ನಾಯಕನಾಗಿ ಗುರುತಿಸಿಕೊಂಡಿರುವ ಸಿಕೋಕಾ, ರಾಹುಲ್ ಗಾಂಧಿ ರ‌್ಯಾಲಿ ಸ್ಥಳಕ್ಕೆ ಬರುವ ಮೊದಲು ಸಾವಿರಾರು ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದ. ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಳಕ್ಕಾಗಮಿಸಿದಾಗ, ಇತರ ಹಿರಿಯ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಹಾರ ಹಾಕಿ ಸ್ವಾಗತಿಸಿದ್ದ.

ಆಗಸ್ಟ್ ಒಂಬತ್ತರಂದು ಸ್ಥಳೀಯ ಪೊಲೀಸರು ಸಿಕೋಕಾನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಆತ ಹೊಂದಿರುವ ಸಂಬಂಧಗಳ ಕುರಿತು ಶಂಕೆ ವ್ಯಕ್ತಪಡಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು.

ಇದನ್ನು ತನ್ನ ಭಾಷಣದಲ್ಲೂ ಸಿಕೋಕಾ ಹೇಳಿದ್ದ. ತಾನು ವೇದಾಂತ ಯೋಜನೆಯನ್ನು ವಿರೋಧಿಸುತ್ತಿರುವ ಕಾರಣ ನನ್ನನ್ನು ವಶಕ್ಕೆ ತೆಗೆದುಕೊಂಡು ನಾಲ್ಕು ದಿನಗಳ ಕಾಲ ಚಿತ್ರಹಿಂಸೆ ನೀಡಿ ಮಾವೋವಾದಿ ಎಂದು ಬಿಂಬಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದ್ದ.

ಸ್ಪಷ್ಟನೆಗೆ ಪ್ರತಿಪಕ್ಷಗಳ ಆಗ್ರಹ...
ರಾಹುಲ್ ಗಾಂಧಿ ಶಂಕಿತ ನಕ್ಸಲ್ ನಾಯಕನ ಜತೆ ವೇದಿಕೆ ಹಂಚಿಕೊಂಡಿರುವ ಕುರಿತು ಗೃಹಸಚಿವ ಪಿ. ಚಿದಂಬರಂ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ಆಗ್ರಹಿಸಿವೆ.

ಇದೊಂದು ಗಂಭೀರ ವಿಚಾರ. ಹೀಗೆ ನಡೆದುಕೊಂಡಲ್ಲಿ ಸರಕಾರವು ನಕ್ಸಲರ ವಿರುದ್ಧ ಹೋರಾಡುತ್ತಿದೆ ಎಂಬುದನ್ನು ಹೇಗೆ ತಾನೇ ನಂಬುವುದು. ಸರಕಾರದಲ್ಲಿನ ಸಚಿವೆಯೊಬ್ಬರು ನಕ್ಸಲರ ಪರವಾಗಿ ಮಾತನಾಡುತ್ತಾರೆ, ಇತ್ತ ಕಾಂಗ್ರೆಸ್ಸಿನ ಯುವರಾಜ ಶಂಕಿತನೊಬ್ಬನ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಇದು ಸ್ವೀಕಾರಾರ್ಹವಲ್ಲ. ತಕ್ಷಣವೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸಂಸತ್ತಿನ ಹೊರಗಡೆ ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ