'ಇಂಡಿಯಾ'ವನ್ನು ಭಾರತ ಎಂದು ನಾಮಕರಣಗೊಳಿಸಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ.
ಸಂವಿಧಾನದಲ್ಲಿರುವ 'ಇಂಡಿಯಾ' ಎಂಬುದಕ್ಕೆ 'ಭಾರತ' ಎಂದು ತಿದ್ದುಪಡಿ ತರಬೇಕು ಎಂದು ಶಾಂತರಾಮ್ ನಾಯ್ಕ್ ಎಂಬವರು ವೈಯಕ್ತಿಕ ಮಸೂದೆಯನ್ನು ಮಂಡಿಸಿದರು.
'ಇಂಡಿಯಾ' ಎನ್ನುವುದು ಪ್ರಾದೇಶಿಕ ಕಲ್ಪನೆಯ ಅರ್ಥವನ್ನು ನೀಡುತ್ತದೆ. ಆದರೆ 'ಭಾರತ' ಎನ್ನುವುದು ಅದಕ್ಕಿಂತಲೂ ಹೆಚ್ಚಿನ ಅರ್ಥಗಳನ್ನು ನೀಡುತ್ತದೆ ಎಂದಿರುವ ನಾಯ್ಕ್, ನಾವು ದೇಶವನ್ನು ಹೊಗಳುವ ಸಂದರ್ಭದಲ್ಲಿ 'ಭಾರತ್ ಮಾತಾ ಕೀ ಜೈ' ಎಂದು ಹೇಳುತ್ತೇವೆಯೇ ಹೊರತು 'ಇಂಡಿಯಾ ಕೀ ಜೈ' ಎಂದಲ್ಲ ಎಂದು ವಿವರಣೆ ನೀಡಿದ್ದಾರೆ.
ಇದರ ಜತೆಗೆ ಇನ್ನೊಂದು ವೈಯಕ್ತಿಕ ಮಸೂದೆಯನ್ನೂ ನಾಯ್ಕ್ ಮಂಡಿಸಿದ್ದಾರೆ. ಹಾನಿಕಾರಕ ಅಥವಾ ಯಾವುದೇ ವೈದ್ಯಕೀಯ ಅಂಶಗಳನ್ನು ಹೊಂದಿರದ ಮದ್ದುಗಳನ್ನು ಪ್ರಚಾರ ಮಾಡುವುದು ಮತ್ತು ಮಾರುಕಟ್ಟೆಗೆ ತರುವವರಿಗೆ ಶಿಕ್ಷೆಯನ್ನು ಹೆಚ್ಚು ಮಾಡಬೇಕು ಎನ್ನುವುದು ಅವರ ಬೇಡಿಕೆ.
ಮದುವೆಯಾಗುವ ಜೋಡಿ ಅದಕ್ಕೂ ಮೊದಲು ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಬೇಕು ಎಂದು ಎನ್‌ಸಿಪಿಯ ಜನಾರ್ದನ್ ವಾಗ್ಮೋರ್ ಎಂಬವರು ತನ್ನ ವೈಯಕ್ತಿಕ ಮಸೂದೆಯನ್ನು ಮಂಡಿಸಿದರು.
ಏಡ್ಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ಮತ್ತು ಇತರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಏಡ್ಸ್ ನಿಯಂತ್ರಣ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವಂತೆಯೂ ಅವರು ತನ್ನ ಮಸೂದೆಯಲ್ಲಿ ದಾಖಲಿಸಿದ್ದಾರೆ.
ಸಿಪಿಐಎಂನ ಬೃಂದಾ ಕಾರಟ್ ಅವರು 2006ರ ಪರಿಶಿಷ್ಟ ಬುಡಕಟ್ಟು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಅಂಗೀಕಾರ) ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ವೈಯಕ್ತಿಕ ಮಸೂದೆಯನ್ನು ಮಂಡಿಸಿದರು.