ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಆಜಾದ್‌ನನ್ನು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು?
(Maoist leader | Cherukuri Rajkumar | Azad | Andhra Pradesh Police)
ಮಾವೋವಾದಿ ನಾಯಕ ಚೆರುಕುರಿ ರಾಜ್‌ಕುಮಾರ್ ಆಲಿಯಾಸ್ ಆಜಾದ್‌ನನ್ನು ಆಂಧ್ರಪ್ರದೇಶ ಪೊಲೀಸರು ಹತ್ತಿರದಿಂದ ಗುಂಡಿಕ್ಕಿ ಕೊಂದಿದ್ದರು ಮತ್ತು ಇದೊಂದು ಎನ್‌ಕೌಂಟರ್ ಆಗಿರಲಿಲ್ಲ ಎಂದು ನಿಯತಕಾಲಿಕವೊಂದು ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಜುಲೈ 1ರಂದು ಆಡಿಲಾಬಾದ್‌ನಲ್ಲಿ ಆಂಧ್ರಪ್ರದೇಶ ಪೊಲೀಸರು ನಕ್ಸಲ್ ನಾಯಕ ಆಜಾದ್‌ನನ್ನು ಹತ್ತಿರದಿಂದ ಗುಂಡಿಕ್ಕಿ ಸಾಯಿಸಿದ್ದರು ಮತ್ತು ಇದು ನಕಲಿ ಎನ್‌ಕೌಂಟರ್ ಆಗಿತ್ತು ಎಂದು ಹೇಳಲಾಗಿದೆ.
ತಾನು ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದಿರುವುದಾಗಿ ಹೇಳಿಕೊಂಡಿರುವ ನಿಯತಕಾಲಿಕ, ಈ ಬಗ್ಗೆ ಮೂರು ಭಿನ್ನ ನಗರಗಳ ತಜ್ಞರಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ.
ಆಜಾದ್ ಶವ ಮರಣೋತ್ತರ ಪರೀಕ್ಷೆಯ ವರದಿಯನ್ನು ಮೂವರು ಖ್ಯಾತ ವಿಧಿವಿಜ್ಞಾನ ವೈದ್ಯಕೀಯ ಮತ್ತು ಗುಂಡುಗಳಿಂದಾದ ಗಾಯ ತಜ್ಞರುಗಳಿಗೆ ಸತ್ತವನ ಗುರುತನ್ನು ಬಹಿರಂಗಪಡಿಸದೆ ಒಂದು ನಿರ್ಧಾರಕ್ಕೆ ಬರುವಂತೆ ಸೂಚಿಸಲಾಗಿತ್ತು. ಅವರ ಪ್ರಕಾರ ಬಲಿಪಶುವನ್ನು 7.5 ಸೆಂಟಿ ಮೀಟರ್ ಅಥವಾ ಅದಕ್ಕಿಂತಲೂ ಕಡಿಮೆ ದೂರದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮ್ಯಾಗಜಿನ್ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಆಜಾದ್ ಎದೆ ತೊಟ್ಟಿನ ಎರಡು ಇಂಚು ಮೇಲೆ ಗುಂಡು ದೇಹವನ್ನು ಪ್ರವೇಶಿಸಿದ್ದು, ಇಲ್ಲಿ ಒಂದು ಸೆಂಟಿ ಮೀಟರಿನಷ್ಟು ಅಂಡಾಕಾರದ ಗಾಯವಾಗಿದೆ. ಈ ಗಾಯವು ಹೃದಯಕ್ಕೆ ಪ್ರವೇಶಿಸಿ ಗುಂಡು ಬೆನ್ನ ಹಿಂದಿನಿಂದ ತೂರಿಕೊಂಡು ಹೋಗಿದೆ ಎಂದು ಮರಣೋತ್ತರ ವರದಿಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಮಾವೋವಾದಿ ನಾಯಕನ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಗುಂಡು ಹಾರಿಸಲಾಗಿತ್ತು ಎಂಬ ಪೊಲೀಸರ ಹೇಳಿಕೆಯು ಶವದ ಮರಣೋತ್ತರ ಪರೀಕ್ಷೆಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ... ಮರಣೋತ್ತರ ವರದಿಯ ಪ್ರಕಾರ ಪೊಲೀಸರು ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕ್ರಾಂತಿಕಾರಿ ಲೇಖಕ ವರವರ ರಾವ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ಪೊಲೀಸರು ಹತ್ತಿರದಿಂದ ಆಜಾದ್ ಅವರನ್ನು ಹತ್ಯೆಗೈದಿದ್ದಾರೆ, ಇದು ಖಂಡನೀಯ. ಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಕ್ಸಲರನ್ನು ಬೆಂಬಲಿಸುತ್ತಾ ಬಂದಿರುವ ರಾವ್ ಒತ್ತಾಯಿಸಿದ್ದಾರೆ.