ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ (Bhopal gas case | Keshub Mahindra | Supreme Court | Union Carbide India)
Bookmark and Share Feedback Print
 
ಸಾವಿರಾರು ಅಮಾಯಕರ ಸಾವಿಗೆ ಕಾರಣವಾದ ಭೋಪಾಲ್ ಅನಿಲ ದುರಂತ ಪ್ರಕರಣದಲ್ಲಿ ಕಡಿಮೆ ಪ್ರಮಾಣದ ಶಿಕ್ಷೆಯನ್ನು ಕೆಳಗಿನ ನ್ಯಾಯಾಲಯದಿಂದ ಪಡೆದುಕೊಂಡು ತೃಪ್ತರಾಗಿದ್ದವರಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ.

ಪ್ರಕರಣದ ಆರೋಪಿಗಳ ಮೇಲೆ ದಂಡನಾರ್ಹ ನರಹತ್ಯೆಯ ಕಠಿಣ ಆರೋಪಗಳನ್ನು ದಾಖಲಿಸಬೇಕೆಂಬ ಸಿಬಿಐ ಮನವಿಗೆ ಸ್ಪಂದಿಸಿರುವ ಅಪೆಕ್ಸ್ ಕೋರ್ಟ್, ಯೂನಿಯನ್ ಕಾರ್ಬೈಡ್ ಕಂಪನಿಯ ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದೆ.

ಕೆಳಗಿನ ನ್ಯಾಯಾಲಯದಲ್ಲಿ ದೋಷಿಗಳೆಂದು ತೀರ್ಪು ಪಡೆದುಕೊಂಡಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಕಂಪನಿಯ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಮತ್ತು ಇತರ ಏಳು ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆ 304Aಯ ಬದಲು ಕಠಿಣವಾಗಿರುವ 304-IIಯನ್ನಾಗಿ ಯಾಕೆ ಪರಿವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಐಪಿಸಿಯ 304A ವಿಧಿಯಡಿಯಲ್ಲಿ ದೋಷಿಯಾದರೆ ಕೇವಲ ಎರಡು ವರ್ಷಗಳ ಜೈಲು ಶಿಕ್ಷೆ ಮಾತ್ರ ನೀಡಲಾಗುತ್ತದೆ. ಅದೇ 304-IIರಲ್ಲಾದರೆ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವಿದೆ.

15,000ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ದುರಂತ ನಡೆದ 26 ವರ್ಷಗಳ ನಂತರ ಯೂನಿಯನ್ ಕಾರ್ಬೈಡ್ ಇಂಡಿಯಾದ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಮತ್ತು ಇತರ ಆರು ಮಂದಿಗೆ ಜೂನ್ ಏಳರಂದು ಎರಡು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಲ್ತಾಮಸ್ ಕಬೀರ್ ಮತ್ತು ಆರ್.ವಿ. ರವೀಂದ್ರ ಅವರನ್ನೊಳಗೊಂಡ ಪೀಠವು, ದೋಷಿಗಳ ವಿರುದ್ಧ 10 ವರ್ಷಗಳ ಗರಿಷ್ಠ ಜೈಲು ಶಿಕ್ಷೆಯ ಅವಕಾಶವಿರುವ ಐಪಿಸಿ 304-IIರಡಿಯಲ್ಲಿ ಯಾಕೆ ವಿಚಾರಣೆ ನಡೆಸಲಾಗಿಲ್ಲ ಎಂದೂ ಪ್ರಶ್ನಿಸಿದೆ.

ಕೆಳಗಿನ ನ್ಯಾಯಾಲಯದ ತೀರ್ಪಿನಲ್ಲಿ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಸಂದಾಯವಾಗಿಲ್ಲ. ಈ ಪ್ರಕ್ರಿಯೆಯಲ್ಲಿ ಭಾರೀ ವೈಫಲ್ಯವಾಗಿದೆ ಎಂದು ಸಿಬಿಐ ತನ್ನ ಮೇಲ್ಮನವಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ಮಹೀಂದ್ರ ಮತ್ತು ಇತರ ಆರು ಮಂದಿಯ ವಿರುದ್ಧ ನಿರ್ಲಕ್ಷ್ಯ ಮತ್ತು ಮುಂದಾಲೋಚನೆಯಿಲ್ಲದ ಕ್ರಮದಿಂದಾಗಿ ಇಷ್ಟೊಂದು ಮಂದಿ ಸಾಯುವಂತಾಯಿತು ಎಂಬ ಆರೋಪವನ್ನು 1996ರ ಸೆಪ್ಟೆಂಬರ್ 13ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಒಪ್ಪಿಕೊಳ್ಳದೇ ಇರುವುದನ್ನು ಮರು ಪರಿಗಣಿಸುವಂತೆ ಸಿಬಿಐ ಕೇಳಿಕೊಂಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಭೋಪಾಲ್‌ನ ವಿಚಾರಣಾ ನ್ಯಾಯಾಲಯವು ಮಹೀಂದ್ರಾ, ವಿಜಯ್ ಗೋಖಲೆ, ಕಿಶೋರ್ ಕಾಮ್ದಾರ್, ಜೆ.ಎನ್. ಮುಕುಂದ್, ಎಸ್.ಪಿ. ಚೌದರಿ, ಕೆ.ವಿ. ಶೆಟ್ಟಿ ಮತ್ತು ಎಸ್.ಐ. ಖುರೇಷಿಯವರನ್ನು ದೋಷಿಗಳೆದು ತೀರ್ಪು ನೀಡಿ, ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು.

ವಿಚಾರಣಾ ನ್ಯಾಯಾಲಯದ ಈ ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳ ವಿಚಾರಣೆಯನ್ನು ಕಠಿಣವಲ್ಲದ ಕಾನೂನುಗಳಡಿಯಲ್ಲಿ ನಡೆಸಲಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ನಾಗರಿಕರು, ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟಿದ್ದವು.
ಸಂಬಂಧಿತ ಮಾಹಿತಿ ಹುಡುಕಿ