'ಕೇಸರಿ ಭಯೋತ್ಪಾದನೆ' ಆರೋಪದಿಂದ ಸ್ವತಃ ಕಾಂಗ್ರೆಸ್ ಹಿಂದೆ ಸರಿದಿರುವ ಹೊರತಾಗಿಯೂ ಉದ್ಧಟತನ ಮುಂದುವರಿಸಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಈ ವ್ಯಾಖ್ಯಾನದ ಏಕಸಾಮ್ಯತೆ ನನ್ನದಲ್ಲ ಎಂದು ಜಾರಿಕೊಳ್ಳುವ ಯತ್ನವನ್ನೂ ನಡೆಸಿದ್ದಾರೆ.
'ಕೇಸರಿ ಭಯೋತ್ಪಾದನೆ' ಎಂಬ ಪದಗುಚ್ಛವನ್ನು ಬಳಸುವ ಮೂಲಕ ಬಲಪಂಥೀಯ ಭಯೋತ್ಪಾದನೆಯ ತವರನ್ನು ಬಡಿದೆಬ್ಬಿಸಿದ್ದೇನೆ ಮತ್ತು ನನ್ನ ಉದ್ದೇಶ ಸಾಧನೆಯಾಗಿದೆ ಎಂದು ಸಚಿವರು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ವಿಷಾದ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ.
ಈ ವ್ಯಾಖ್ಯಾನವನ್ನು ನಾನೇ ಮೊದಲ ಬಾರಿಗೆ ಮಾಡಿರುವುದಲ್ಲ. ಈ ಹಿಂದೆ ಅದರ ಬಳಕೆಯಾಗಿದೆ. ಹಾಗಾಗಿ ಅದರ ಪೇಟೆಂಟ್ ನನ್ನದಲ್ಲ. ಹಾಗಿದ್ದೂ ಪಕ್ಷ ತೆಗೆದುಕೊಳ್ಳುವ ನಿಲುವಿಗೆ ತಾನು ಬದ್ಧ ಎಂದು ತಿಳಿಸಿದ್ದಾರೆ.
ದೇಶದಲ್ಲಿನ ಇತ್ತೀಚಿನ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಲಪಂಥೀಯ ಮೂಲಭೂತವಾದಿ ಸಂಘಟನೆಗಳು ಪಾತ್ರವಹಿಸಿರುವ ಶಂಕೆಯನ್ನು ಇತ್ತೀಚೆಗಷ್ಟೇ ನಡೆಸಲಾಗಿದ್ದ ಪೊಲೀಸ್ ಅಧಿಕಾರಿಗಳ ಸಮಾವೇಶದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿದಂಬರಂ ಹೇಳಿದ್ದರು.
ಅವುಗಳು ಧಾರ್ಮಿಕ ಮೂಲಭೂತವಾದಿ ಗುಂಪುಗಳು. ನಾನು ಬಳಸಿರುವ ಸಂದೇಶದ ಅಗತ್ಯ ವ್ಯರ್ಥವಾಗಿಲ್ಲ, ಅದು ಸಂಬಂಧಪಟ್ಟವರನ್ನು ಸರಿಯಾಗಿಯೇ ನಾಟಿದೆ. ಹಾಗಾಗಿ ಸಂಕಲ್ಪದ ಸಾಧನೆಯಾಗಿದೆ ಎಂದು ರಾಜಧಾನಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮಿಳುನಾಡು ಮೂಲದ ರಾಜಕಾರಣಿ ಹೇಳಿದ್ದಾರೆ.
ಗೃಹಸಚಿವರು ನೀಡಿದ್ದ ವಿವಾದಿತ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಶಿವಸೇನೆಗಳು ಸಂಸತ್ತಿನಲ್ಲಿ ಆಗ್ರಹಿಸಿದ್ದವು. ಇದರ ಬಗ್ಗೆ ಸಂಸತ್ತಿನ ಹೊರಗಡೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ, ಭಯೋತ್ಪಾದನೆಗೆ ಬಣ್ಣವಿಲ್ಲ; ಅದರ ಬಣ್ಣ ಏನಿದ್ದರೂ ಕಪ್ಪೇ. ಇಂತಹ ಹೇಳಿಕೆ ನೀಡುವವರು ಶಬ್ಧಗಳ ಆಯ್ಕೆಯಲ್ಲಿ ಜಾಗರೂಕತೆ ವಹಿಸಬೇಕು ಎಂದು ಸಲಹೆ ನೀಡಿದ್ದರು.
ಇದ್ಯಾವುದನ್ನೂ ಲೆಕ್ಕಿಸದೆ ಚಿದಂಬರಂ ತನ್ನ ಸಮರ್ಥನೆಯನ್ನು ತರೇವಾರಿಯಾಗಿ ಮುಂದುವರಿಸಿದ್ದಾರೆ. ಕೇಸರಿ ಭಯೋತ್ಪಾದನೆ ಎಂಬುದನ್ನು ಬಳಸಿರುವುದು ನಾನೇ ಮೊದಲಲ್ಲ. ಈ ಹಿಂದೆ ಯುಪಿಎಯ ಕೆಲ ಸದಸ್ಯರೂ ಸೇರಿದಂತೆ ಹಲವಾರು ಮಂದಿ, ಹಲವು ಬಾರಿ ಬಳಸಿದ್ದಾರೆ. 2001ರಲ್ಲಿ ಶಿಕ್ಷಣದ ಕೇಸರೀಕರಣದ ಕುರಿತು ಸಂಸತ್ತಿನಲ್ಲಿ ಚರ್ಚೆಯೂ ನಡೆದಿತ್ತು ಎಂದರು.