ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಗೋವಾಕ್ಕೆ ತೆರಳಿದ್ದ ಬಾಲಿವುಡ್ ನಾಯಕ ಅಜಯ್ ದೇವಗನ್ ಸಾರ್ವಜನಿಕವಾಗಿ ಧೂಮಪಾನ ಮಾಡಿದ್ದಕ್ಕಾಗಿ 200 ರೂಪಾಯಿ ದಂಡ ಹಾಕಲಾಗಿದೆ.
ಇದೇ ವರ್ಷದ ಮೇ ತಿಂಗಳಲ್ಲಿ 'ಗೋಲ್‌ಮಾಲ್-3' ಚಿತ್ರೀಕರಣಕ್ಕಾಗಿ ದೇವಗನ್ ಗೋವಾಕ್ಕೆ ಹೋಗಿದ್ದಾಗ ಬಹಿರಂಗವಾಗಿ ಸಿಗರೇಟು ಸೇದಿದ್ದಕ್ಕೆ ದಂಡ ಹೇರಲಾಗಿದೆ. ತನ್ನ ಪ್ರತಿನಿಧಿಯ ಮೂಲಕ ಅವರು ದಂಡವನ್ನು ಬುಧವಾರ ಪಾವತಿ ಮಾಡಿದ್ದಾರೆ ಎಂದು ಪಣಜಿ ಹಿರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವು ಬಾಲಲ್ವೀಕರ್ ತಿಳಿಸಿದ್ದಾರೆ.
IFM
'ಇನಾಕ್ಸ್ ಕಾಂಪ್ಲೆಕ್ಸ್'ನಲ್ಲಿ ನಟ ದೇವಗನ್ ಧೂಮಪಾನ ಮಾಡಿದ್ದು, ಇದು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ, 2003ರ ಸೆಕ್ಷನ್ ನಾಲ್ಕರ ಉಲ್ಲಂಘನೆಯಾಗಿದೆ ಎಂದು ಗೋವಾ ಆರೋಗ್ಯ ಸೇವೆಗಳ ನಿರ್ದೇಶಕ ಡಾ. ರಾಜೇಂದ್ರ ದೇಸಾಯಿಯವರು ಮೇ 31ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೇವಗನ್ ಮತ್ತು ಇನಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ತಕ್ಷಣವೇ ದಂಡ ಹೇರುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಪೊಲೀಸರಿಗೆ ಸೂಚನೆ ನೀಡಿದ್ದರು.
ಆದರೆ ಧೂಮಪಾನ ಕಾಯ್ದೆಯಡಿಯಲ್ಲಿ ವ್ಯಕ್ತಿಯೊಬ್ಬ ಧೂಮಪಾನ ಮಾಡಿದ್ದಕ್ಕಾಗಿ ಸ್ಥಳದ ಮಾಲಿಕರಿಗೆ ಅಥವಾ ವ್ಯವಸ್ಥಾಪಕರಿಗೆ ದಂಡ ಹೇರುವ ಯಾವುದೇ ನಿಯಮಾವಳಿಗಳು ಇಲ್ಲದಿರುವುದರಿಂದ ಇನಾಕ್ಸ್ ಸಿಇಒಗೆ ದಂಡ ಹೇರಲು ನಿರಾಕರಿಸಿದ್ದಾರೆ.
ಈ ಕುರಿತು ತಂಬಾಕು ನಿರ್ಮೂಲನಾ ರಾಷ್ಟ್ರೀಯ ಸಂಸ್ಥೆ (ನೋಟ್) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದು, ಬಾಲಿವುಡ್ ನಟನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿತ್ತು.
ಇದೀಗ ಪೊಲೀಸರು ಕೇವಲ 200 ರೂಪಾಯಿ ದಂಡ ಹೇರಿ ಕೈತೊಳೆದು ಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ 'ನೋಟ್' ಪ್ರಧಾನ ಕಾರ್ಯದರ್ಶಿ ಶೇಖರ್ ಸಾಲ್ಕರ್, ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.