2002ರ ಫೆಬ್ರವರಿ 27ರಂದು ಗೋದ್ರಾದಲ್ಲಿ ಹಿಂದೂ ಕರಸೇವಕರಿದ್ದ ರೈಲು ಬೋಗಿ ಅಗ್ನಿಗಾಹುತಿಯಾದ ನಂತರ ಗುಜರಾತ್‌ನ ಎಲ್ಲಾ ಆಗು-ಹೋಗುಗಳ ಸಂಪೂರ್ಣ ನಿಯಂತ್ರಣ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೈಯಲ್ಲಿತ್ತು ಎಂದು ಮಾಜಿ ಕಿರಿಯ ಗೃಹಸಚಿವ ಗೋರ್ಧನ್ ಝಡಾಫಿಯಾ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಟ್ ತನಿಖಾ ತಂಡದೆದುರು ಹೇಳಿದ್ದಾರೆ.
ಗಲಭೆ ಪ್ರಕರಣಗಳಲ್ಲಿ ಝಡಾಫಿಯಾ ಅವರನ್ನು ಶಂಕಿತ ಎಂದು ಸಿಟ್ (ವಿಶೇಷ ತನಿಖಾ ದಳ) ಹೆಸರಿಸಿದ ನಂತರ ಪತ್ರ ಬರೆದಿದ್ದ ಮಾಜಿ ಸಚಿವರು, ತಾನು ಈ ಪ್ರಕರಣದಲ್ಲಿ ಸಾಕ್ಷಿಯಾಗಲು ಬಯಸುತ್ತಿದ್ದೇನೆ; ಹಾಗಾಗಿ ಮತ್ತೆ ವಿಚಾರಣೆಗಾಗಿ ಸಮನ್ಸ್ ನೀಡಬಾರದು ಎಂದು ಹೇಳಿದ್ದರು.
ತನ್ನನ್ನು ಮೋದಿಯವರು ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದರು, ಅಲ್ಲದೆ ಪರಿಸ್ಥಿತಿಯ ಹೊಣೆಗಾರಿಕೆಯನ್ನು ಆಗಿನ ಸಂಪುಟ ಸಚಿವರಾದ ಅಶೋಕ್ ಭಟ್ ಮತ್ತು ಐ.ಕೆ. ಜಡೇಜಾ ಅವರಿಗೆ ವಹಿಸಿದ್ದರು ಎಂದು ಸಿಟ್‌ಗೆ ಬರೆದಿರುವ ಪತ್ರದಲ್ಲಿ ಝಡಾಫಿಯಾ ತಿಳಿಸಿದ್ದಾರೆ.
ಅಲ್ಲದೆ ಗೋದ್ರಾ ಹಿಂಸಾಚಾರದಲ್ಲಿ ಬಲಿಯಾದ 59 ಮಂದಿಯ ಕಳೇಬರಗಳನ್ನು ಅಹಮದಾಬಾದ್‌ಗೆ ತರುವ ನಿರ್ಧಾರವನ್ನು ಕೂಡ ತೆಗೆದುಕೊಂಡದ್ದು ಮೋದಿ ಮತ್ತು ಭಟ್ ಎಂದು ಝಡಾಫಿಯಾ ಹೇಳಿದ್ದಾರೆ. ಈ ನಿರ್ಧಾರದಿಂದಾಗಿ ಹಿಂಸಾಚಾರ ಭುಗಿಲೇಳಲು ಕಾರಣವಾಯಿತು ಎಂದು ಆರೋಪಿಸಲಾಗಿತ್ತು.
ಘಟನೆ ನಡೆಯುವ ಹೊತ್ತಿನಲ್ಲಿ ನಾನು ವಿಧಾನಸಭೆಯಲ್ಲಿದ್ದೆ. ಆಗ ಮುಖ್ಯಮಂತ್ರಿಯವರು ಅಶೋಕ್ ಭಟ್ ಅವರನ್ನು ಗೋದ್ರಾಕ್ಕೆ ಕಳುಹಿಸಿದ್ದರು. ಮೋದಿಯವರು ಗೋದ್ರಾಕ್ಕೆ ಹೋಗುವ ಕುರಿತು ನನಗೆ ವೈರ್‌ಲೆಸ್ ಮೂಲಕ ಹೊರತುಪಡಿಸಿ ಗೊತ್ತೇ ಇರಲಿಲ್ಲ. ನನಗೆ ಅದು ತಿಳಿದಾಗ ಮೋದಿಯವರು ಗೋದ್ರಾ ಹಾದಿಯಲ್ಲಿದ್ದರು ಎಂದು ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ.
ದುರಂತದ ಬಳಿಕ ಫೆಬ್ರವರಿ 27ರಂದು ಸಂಜೆ ಅಹಮದಾಬಾದ್ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಐಪಿಎಸ್ ಉನ್ನತ ಅಧಿಕಾರಿಗಳ ಸಭೆಯ ಕುರಿತೂ ನನಗೆ ಮುಖ್ಯಮಂತ್ರಿ ಮಾಹಿತಿ ನೀಡಿರಲಿಲ್ಲ. ಹಾಗಾಗಿ ನಾನು ಸಭೆಯಿಂದ ಹೊರಗುಳಿದಿದ್ದೆ. ನಿಯಮಾವಳಿಗಳ ಪ್ರಕಾರ ಮುಖ್ಯಮಂತ್ರಿಯವರು ಸೂಚಿಸಿದರಷ್ಟೇ ರಾಜ್ಯ ಗೃಹಸಚಿವರಿಗೆ ಯಾವುದೇ ವಿಚಾರದಲ್ಲಿ ಮುಂದುವರಿಯಬಹುದಾಗಿದೆ. ಇದೇ ಕಾರಣದಿಂದ ನಾನು ಯಾವುದೇ ಹಿರಿಯ ಕ್ಯಾಬಿನೆಟ್ ಸಚಿವರುಗಳಿಗೆ ನಿರ್ದೇಶನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅವರು ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ಝಡಾಫಿಯಾ ಅವರನ್ನು ಮೂಲೆಗುಂಪು ಮಾಡಿ, ಜಡೇಜಾ ಮತ್ತು ಭಟ್ ಅವರನ್ನು ನಿಯಂತ್ರಣಾ ಕೊಠಡಿಗೆ ಕಳುಹಿಸಲು ಮೋದಿ ನಿರ್ಧರಿಸಿದ್ದರು.
ವಿವಾದಿತ ರಾಮ ಜನ್ಮಭೂಮಿ ಕುರಿತು ಚರ್ಚಿಸಲು ವಿಶ್ವ ಹಿಂದೂ ಪರಿಷತ್ ಕರೆದಿದ್ದ ಸಭೆಗೆ ತೆರಳಿದ್ದ ಹಿಂದೂ ಕರಸೇವಕರು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸ್ ಬರುತ್ತಿರುವ ಹೊತ್ತಿನಲ್ಲಿ 500ಕ್ಕೂ ಹೆಚ್ಚು ಮಂದಿಯ ಮುಸ್ಲಿಮರ ಗುಂಪು ಕರಸೇವಕರಿದ್ದ ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ 23 ಪುರುಷರು, 15 ಮಹಿಳೆಯರು ಮತ್ತು 20 ಮಕ್ಕಳು ಸೇರಿದಂತೆ ಒಟ್ಟು 59 ಮಂದಿ ಸಜೀವ ದಹನವಾಗಿದ್ದರು. ಈ ಬಳಿಕ ಗುಜರಾತ್‌ನಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು.