ತಿರುವನಂತಪುರ, ಶನಿವಾರ, 4 ಸೆಪ್ಟೆಂಬರ್ 2010( 15:02 IST )
ಅಂದು ಮುಸ್ಲಿಂ ಮೂಲಭೂತವಾದಿಗಳ ಮತಾಂಧ ಕೃತ್ಯದಿಂದಾಗಿ ಕೈ ಕಳೆದುಕೊಂಡು ನ್ಯಾಯದ ನಿರೀಕ್ಷೆಯಲ್ಲಿದ್ದ ಕೇರಳದ ಉಪನ್ಯಾಸಕನಿಗೆ ಕಾಲೇಜು ಕೂಡ ಆಘಾತ ನೀಡಿದೆ. ಕೆಲಸದಿಂದ ವಜಾಗೊಳಿಸಿ ಅದೀಗ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ ಒಂದರಿಂದ ಅನ್ವಯವಾಗುವಂತೆ ನಿಮ್ಮನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ ಎಂದು ಕಾಲೇಜು ಆಡಳಿತವು ಜೋಸೆಫ್ ಅವರಿಗೆ ಮಾಹಿತಿ ನೀಡಿದೆ.
ಕಾಲೇಜಿನ ಪ್ರಶ್ನೆ ಪತ್ರಿಕೆ ರೂಪಿಸಿದ್ದ ಉಪನ್ಯಾಸಕ ಜೋಸೆಫ್, ಅದರಲ್ಲಿ ಪ್ರವಾದಿ ಮೊಹಮ್ಮದ್ ಅವರ ಅಪಮಾನಕಾರಿ ಉಲ್ಲೇಖವನ್ನು ಮಾಡಿದ್ದರು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಮುಸ್ಲಿಂ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಉಪನ್ಯಾಸಕನ ಮುಂಗೈ ಕತ್ತರಿಸಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.
PR
ಕೈ ಕತ್ತರಿಸಿದ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ ಜೋಸೆಫ್ ಅವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದ 'ನ್ಯೂ ಮ್ಯಾನ್ ಕಾಲೇಜ್', ಸಮಾಜದ ಒಂದು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ನಿಮ್ಮನ್ನು ಯಾಕೆ ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರಶ್ನಿಸಿತ್ತು.
ಈ ನೋಟೀಸಿಗೆ ಜೋಸೆಫ್ ಉತ್ತರಿಸಿದ್ದರು. ಆದರೆ ಇದರಿಂದ ಸಮಾಧಾನಗೊಳ್ಳದ ಕಾಲೇಜು ಆಡಳಿತ ಮಂಡಳಿಯು, ಅವರನ್ನು ಸೇವೆಯಿಂದ ವಜಾ ಮಾಡಲು ನಿರ್ಧರಿಸಿದೆ.
ಅನಿರೀಕ್ಷಿತ ಆಘಾತವಾಗಿದೆ: ಜೋಸೆಫ್ ಕಾಲೇಜು ಆಡಳಿತ ಮಂಡಳಿಯು ಕೈಗೊಂಡಿರುವ ಕ್ರಮಕ್ಕೆ ಪ್ರೊಫೆಸರ್ ಜೋಸೆಫ್ ಆಘಾತ ವ್ಯಕ್ತಪಡಿಸಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕಿದು ನಿರೀಕ್ಷಿತವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಆದರೂ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಕುರಿತು ಇದುವರೆಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲಸದಿಂದ ವಜಾಗೊಳಿಸುತ್ತಾರೆ ಎಂಬ ಕಲ್ಪನೆಯೂ ನನ್ನಲ್ಲಿ ಇರಲಿಲ್ಲ ಎಂದಿರುವ ಜೋಸೆಫ್, ಕಾಲೇಜು ಆಡಳಿತ ಮಂಡಳಿಯು ನನಗೆ ಮತ್ತು ನನ್ನ ಕುಟುಂಬಕ್ಕೆ ಗರಿಷ್ಠ ಶಿಕ್ಷೆಯನ್ನು ನೀಡಿತ್ತು. ಇದೀಗ ವಜಾಗೊಳಿಸಿರುವುದು ಮತ್ತಷ್ಟು ನೋವು ತಂದಿದೆ ಎಂದಿದ್ದಾರೆ.
ಜೋಸೆಫ್ ಮೇಲಿರುವ ಆರೋಪವಿದು... ಬಿ.ಕಾಂ. ಎರಡನೇ ವರ್ಷದ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಜೋಸೆಫ್, ದೇವರು ಮತ್ತು ಮೊಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಲಾಗಿತ್ತು.
ಇಲ್ಲಿ ಉಲ್ಲೇಖಿಸಿದ ಮೊಹಮ್ಮದ್ ಎಂಬುವುದನ್ನು ಪ್ರವಾದಿ ಮೊಹಮ್ಮದ್ ಎಂದೇ ಪರಿಗಣಿಸಿದ ಕೆಲವು ನಿರ್ದಿಷ್ಟ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿ, ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಕ್ರೈಸ್ತ ಚರ್ಚ್ ವತಿಯಿಂದ ನಡೆಸಲ್ಪಡುವ ಈ ಕಾಲೇಜಿನ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು.
ನಂತರ ಕಾಲೇಜು ಆಡಳಿತ ಮಂಡಳಿಯು ಕ್ಷಮೆ ಯಾಚಿಸಿತ್ತು. ಸರಕಾರದ ಸೂಚನೆಯಂತೆ ಆರೋಪಿ ಪ್ರೊಫೆಸರ್ ಜೋಸೆಫ್ ಅವರನ್ನು ಒಂದು ವರ್ಷ ಅಮಾನತು ಮಾಡಿತ್ತು.
ನಂತರ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆ ಜೋಸೆಫ್ ಕಣ್ಮರೆಯಾಗಿದ್ದರು. ಆದರೆ ಒಂದೆರಡು ವಾರಗಳ ನಂತರ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಿದ್ದರು. ಕೆಲವೇ ದಿನಗಳಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇದೀಗ ಕೆಲಸದಿಂದ ವಜಾಗೊಳಿಸಿ ಖಾಸಗಿ ಕಾಲೇಜು ಆದೇಶ ಹೊರಡಿಸಿದೆ.