ಇಬ್ಬರು ನಕ್ಸಲರ ಬಂಧನ ಮತ್ತು ಅಪಹೃತ ಪೊಲೀಸ್ ಸಿಬ್ಬಂದಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರಿಯುತ್ತಿದ್ದಂತೆ ಹೇಳಿಕೆ ನೀಡಿರುವ ಮಾವೋವಾದಿಗಳು, ಮೂವರು ಪೊಲೀಸರು ತಮ್ಮ ಬಳಿ ಸುರಕ್ಷಿತವಾಗಿದ್ದಾರೆ; ಮಾತುಕತೆಗೆ ನಾವು ಮುಕ್ತವಾಗಿದ್ದೇವೆ, ಆದರೆ ಕಾಲ ಓಡುತ್ತಿರುವುದನ್ನು ನೆನಪಿಸುತ್ತಿದ್ದೇವೆ ಎಂದಿದ್ದಾರೆ.
ಕೂಂಬಿಂಗ್ ಕಾರ್ಯಾಚರಣೆಯ ಬಗ್ಗೆ ಸ್ವತಃ ವೈಯಕ್ತಿಕ ಮುತುವರ್ಜಿಯಿಂದ ಪರಿಶೀಲನೆ ನಡೆಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಸರ್ವಪಕ್ಷಗಳ ಸಭೆ ಕರೆದಿದ್ದು, ಎದುರಾಗಿರುವ ಸಮಸ್ಯೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಈ ನಡುವೆ ಮಾಧ್ಯಮ ಕಚೇರಿಗಳಿಗೆ ದೂರವಾಣಿ ಕರೆ ಮಾಡಿರುವ ಸ್ವಘೋಷಿತ ಮಾವೋವಾದಿ ವಕ್ತಾರ ಅವಿನಾಶ್, ಅಪಹೃತ ಪೊಲೀಸ್ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ; ಆದರೆ ಬಿಹಾರ ಸರಕಾರವು ತಕ್ಷಣವೇ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾನೆ.
ಲಖಿಸರಾಯ್ ಜಿಲ್ಲೆಯಿಂದ ಭಾನುವಾರ ಅಪಹರಿಸಲ್ಪಟ್ಟಿರುವ ಧ್ವನಿಯನ್ನೊಳಗೊಂಡ ಸಿಡಿಯನ್ನು ತಾವು ಶೀಘ್ರದಲ್ಲೇ ಒದಗಿಸಲಿದ್ದೇವೆ ಎಂದೂ ಅವಿನಾಶ್ ತಿಳಿಸಿದ್ದಾನೆ.
ಅದೇ ಹೊತ್ತಿಗೆ ಕಾಲ ಸುಮ್ಮನೆ ಕೂತಿಲ್ಲ ಎಂದು ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿರುವ ನಕ್ಸಲ್ ನಾಯಕ, ಪೊಲೀಸರ ಬಿಡುಗಡೆಗಾಗಿ ತಕ್ಷಣವೇ ಮಾತುಕತೆಗೆ ಮುಂದಾಗಿ ಎಂದು ಸಲಹೆ ನೀಡಿದ್ದಾನೆ.
ಈ ಹಿಂದೆ ಸಬ್ ಇನ್ಸ್‌ಪೆಕ್ಟರ್ ಅಭಯ್ ಯಾದವ್ ಅವರನ್ನು ಹತ್ಯೆಗೈಯಲಾಗಿದೆ ಎಂದು ನೀವು ಹೇಳಿಕೆ ನೀಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಆತ, ಒತ್ತೆ ಪ್ರಸಂಗವನ್ನು ನಿರ್ವಹಿಸುತ್ತಿರುವವರ ಮನಸ್ಸಿನಲ್ಲಿ ಭೀತಿಯನ್ನು ಸೃಷ್ಟಿಸಲು ಇಂತಹ ಹೇಳಿಕೆ ನೀಡಿದ್ದೆ ಎಂದಿದ್ದಾನೆ.
ಪಾಟ್ನಾದಿಂದ 150 ಕಿಲೋ ಮೀಟರ್ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬಿಹಾರ್ ಮಿಲಿಟರಿ ಪೊಲೀಸ್ ಎಎಸ್ಐ ಲುಕಾಸ್ ತೇಟೆಯವರ ಶವ ಪತ್ತೆಯಾಗಿತ್ತು. ಅಭಯ್ ಯಾದವ್ ಅವರನ್ನು ಕೊಂದಿದ್ದೇವೆ ಎಂದು ನಕ್ಸಲರು ಹೇಳಿಕೆ ನೀಡಿದ್ದರಾದರೂ, ತೇಟೆಯವರ ಶವ ಪತ್ತೆಯಾಗಿತ್ತು.
ಭಾನುವಾರ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದಿದ್ದ ಎನ್‌ಕೌಂಟರ್ ಸಂದರ್ಭದಲ್ಲಿ ಎಂಟು ಪೊಲೀಸರನ್ನು ಮಾವೋಗಳು ಕೊಂದು ಹಾಕಿದ್ದರು. ಅಲ್ಲದೆ ರೂಪೇಶ್ ಕುಮಾರ್, ಅಭಯ್ ಯಾದವ್, ಎಸ್ತೆಹಾಮ್ ಖಾನ್ ಮತ್ತು ಲುಕಾಸ್ ತೇಟೆ ಎಂಬ ಪೊಲೀಸರನ್ನು ಅಪಹರಿಸಿದ್ದರು.
ರಾಜ್ಯ ಸರಕಾರವು ನಕ್ಸಲರ ಜತೆ ಮಾತುಕತೆ ನಡೆಸಬೇಕು, ಅವರ ಬೇಡಿಕೆಯಂತೆ ಜೈಲಿನಲ್ಲಿರುವ ಎಂಟು ನಕ್ಸಲೀಯರನ್ನು ಬಿಡುಗಡೆ ಮಾಡಬೇಕು ಎಂದು ಪೊಲೀಸರ ಕುಟುಂಬ ಒತ್ತಾಯಿಸುತ್ತಿದ್ದರೂ ಸರಕಾರ ಮಾತ್ರ ಕಾರ್ಯಾಚರಣೆಗೆ ಒತ್ತು ನೀಡುತ್ತಾ ಬಂದಿದೆ.