ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಂಡತಿ ಗಂಡನ ಗರ್ಲ್‌ಫ್ರೆಂಡ್ ವಿರುದ್ಧ ದೂರು ನೀಡುವಂತಿಲ್ಲ!: ಸುಪ್ರೀಂಕೋರ್ಟ್ (wife|supreme court|indian penal code|husband's girlfriend)
ಹೆಂಡತಿ ಗಂಡನ ಗರ್ಲ್‌ಫ್ರೆಂಡ್ ವಿರುದ್ಧ ದೂರು ನೀಡುವಂತಿಲ್ಲ!: ಸುಪ್ರೀಂಕೋರ್ಟ್
ನವದೆಹಲಿ, ಗುರುವಾರ, 16 ಸೆಪ್ಟೆಂಬರ್ 2010( 09:47 IST )
WD
ಗಂಡನ ಬದುಕಿನಲ್ಲಿರುವ ಪರಸ್ತ್ರೀ ವಿವಾಹ ವಿಚ್ಛೇದನದ ಪ್ರಮುಖ ಕಾರಣವಾಗಿರಬಹುದಾಗಿದ್ದರೂ, ಹೆಂಡತಿ ಪರಸ್ತ್ರೀಯನ್ನು ತನಗೆ ಮಾನಸಿಕ ಹಿಂಸೆ ನೀಡಿದ್ದಾಳೆಂಬುದನ್ನು ಆರೋಪಿಸುವಂತಿಲ್ಲ!
ಹೀಗೆ ಹೇಳಿದ್ದು ಸುಪ್ರೀಂಕೋರ್ಟ್. ಭಾರತೀಯ ದಂಡ ಸಂಹಿತೆಯ 498ಎ ಸೆಕ್ಷನ್ ಅಡಿ ಸುಪ್ರೀಂಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ಜಸ್ಟೀಸ್ ಅಲ್ಟಾಮಸ್ ಕಬೀರ್ ಹಾಗೂ ಎ.ಕೆ.ಪಟ್ನಾಯಿಕ್ ಅವರಿದ್ದ ನ್ಯಾಯಪೀಠ ಪ್ರಕರಣವೊಂದಕ್ಕೆ ಸಂಬಂಧಿಸಿ ಈ ತೀರ್ಪು ನೀಡಿದೆ. ತನ್ನ ಗಂಡನ ಜೊತೆಗೆ ಮದುವೆಯಾಗದೆ ಒಬ್ಬಾಕೆ ವಾಸಿಸುತ್ತಿದ್ದು, ತನಗೆ ಆಕೆ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾಳೆ ಹಾಗೂ ಇದೇ ನಮ್ಮಿಬ್ಬರ ದಾಂಪತ್ಯದ ವಿರಸಕ್ಕೆ ಕಾರಣವಾಗಿದೆ ಎಂದು ಮಹಿಳೆಯೊಬ್ಬರು ದೂರಿದ್ದರು. ಈ ಹಿನ್ನೆಲೆಯಲ್ಲಿ ಪರಾಮರ್ಶೆ ಮಾಡಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಗಂಡನ ಗರ್ಲ್‌ಫ್ರೆಂಡ್ ಅಥವಾ ಉಪ ಪತ್ನಿ ಮದುವೆಯಾಗದೆ ಜೊತೆಗಿದ್ದರೆ ಅದು ಇವರಿಬ್ಬರ ವಿಚ್ಛೇದನಕ್ಕೆ ಕಾರಣವಾಗಬಲ್ಲದು ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.
ಗಮನಾರ್ಹ ಅಂಶವೆಂದರೆ, ಇದಕ್ಕೂ ಮೊದಲು ಜಾರ್ಖಂಡ್ ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್ ನೀಡಿದ್ದ ತೀರ್ಪುಗಳ ಪ್ರಕಾರ, ಗಂಡನ ಗರ್ಲ್‌ಫ್ರೆಂಡ್ ಮಾನಸಿಕ ಚಿತ್ರಹಿಂಸೆ ನೀಡಿದ ಪ್ರಕರಣವನ್ನು ಎದುರಿಸಲು ಅರ್ಹಳು ಎಂದು ತೀರ್ಪು ನೀಡಿತ್ತು. ಆದರೆ ಈ ಪ್ರತ್ಯೇಕ ಪ್ರಕರಣಕ್ಕೆ ಹಲವು ಹಿಂದಿನ ಉದಾಹರೆಗಳನ್ನು ಉದಾಹರಿಸಿರುವ ಸುಪ್ರೀಂಕೋರ್ಟ್, ಗರ್ಲ್‌ಪ್ರೆಂಡ್ ವಿರುದ್ಧ ಹೆಂಡತಿ ನೀಡಿದ ದೂರನ್ನು ತಳ್ಳಿ ಹಾಕಿದೆ.
ಆದರೆ ಇದೇ ವೇಳೆ, ಗಂಡನೊಬ್ಬ ತನ್ನ ಹೆಂಡತಿಯ ಹೊರತಾಗಿ ಮತ್ತೊಬ್ಬಳ ಜೊತೆಗೆ ವಾಸಿಸುತ್ತಿದ್ದರೆ, ಆ ಗರ್ಲ್‌ಫ್ರೆಂಡ್ ಪ್ರತ್ಯಕ್ಷವಾಗಿ ಹೆಂಡತಿಗೆ ಯಾವುದೇ ಮಾನಸಿಕ ಹಿಂಸೆ ನೀಡದಿದ್ದರೂ, ಆಕೆಯ ಗಂಡನ ಜೊತೆಗೆ ಅಕ್ರಮವಾಗಿ ವಾಸಿಸುತ್ತಿರುವುದೇ ಹೆಂಡತಿಗೆ ಮಾನಸಿಕ ಚಿತ್ರಹಿಂಸೆ ನೀಡಿದಂತಾಗುವುದಲ್ಲವೇ ಎಂಬ ಪ್ರಶ್ನೆಯೂ ಈ ತೀರ್ಪಿನ ಹಿಂದೆಯೇ ಎದ್ದಿದೆ.