ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದಿದ್ದ ವ್ಯವಸ್ಥೆಯನ್ನೇ ಮುಂದುವರಿಸುವುದಕ್ಕೆ ಒಲವು ತೋರಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಕುರಿತು ಬಿಜೆಪಿಯಷ್ಟೇ ನಿರ್ಧರಿಸಬೇಕಿದೆ ಎಂದಿದ್ದಾರೆ.
ಈ ಸಮಸ್ಯೆಯನ್ನು ಬಿಜೆಪಿಯೇ ಪರಿಹರಿಸಬೇಕು. ನಾವು ಹಳೆಯ ಒಪ್ಪಂದಗಳ ಪರವಾಗಿದ್ದೇವೆ ಎಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಪ್ರಚಾರವನ್ನು ಸಂಯುಕ್ತ ಜನತಾದಳ ವಿರೋಧಿಸಿದ್ದನ್ನು ಉಲ್ಲೇಖಿಸುತ್ತಾ ನವದೆಹಲಿಯಲ್ಲಿ ಕುಮಾರ್ ತಿಳಿಸಿದರು.
ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಿಜೆಪಿ ಪರಿಹಾರ ಮಾಡಲಿದೆ ಎಂಬ ಭರವಸೆ ನನಗಿದೆ ಎಂದು ಹೇಳಿದರಾದರೂ, ಅವರ ದನಿ ಮೋದಿಯವರನ್ನು ಬಿಹಾರ ಚುನಾವಣಾ ಪ್ರಚಾರದಿಂದ ಬಿಜೆಪಿ ದೂರ ಉಳಿಸಬೇಕು ಎಂಬುದನ್ನು ಧ್ವನಿಸುತ್ತಿತ್ತು.
ಅವರದೇ ಪಕ್ಷದ ನಾಯಕ ಶಿವಾನಂದ್ ತಿವಾರಿಯವರಿಗೆ ಬಿಜೆಪಿ ಜತೆಗಿನ ಮೈತ್ರಿ ಇಷ್ಟವಿಲ್ಲ ಎಂಬ ಹೇಳಿಕೆಗಳು ಬರುತ್ತಿರುವುದನ್ನು ಕುಮಾರ್ ಅವರಲ್ಲಿ ಪ್ರಶ್ನಿಸಿದಾಗ, ತಮ್ಮ ಪಕ್ಷದಲ್ಲಿ ಪ್ರತಿಯೊಬ್ಬರೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ನೀತಿಯಡಿಯಲ್ಲಿ ಕಾರ್ಯಾಚರಿಸುವ ಪಕ್ಷ ಎಂದು ಜಾರಿಕೊಂಡರು.
ಅಯೋಧ್ಯೆಯ ಕುರಿತ ಪ್ರಶ್ನೆಗೂ ಇದೇ ರೀತಿಯ ಉತ್ತರ ಬಿಹಾರ ಮುಖ್ಯಮಂತ್ರಿಯವರಿಂದ ಬಂತು. ಚುನಾವಣೆಯ ಮೇಲೆ ನ್ಯಾಯಾಲಯದ ತೀರ್ಪು ಪರಿಣಾಮ ಬೀರುವ ಸಾಧ್ಯತೆಗಳಿವೆಯೇ ಎಂದು ಅವರಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯ ಅಥವಾ ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಬೇಕು ಎಂಬುದು ಜೆಡಿಯು ನಿಲುವು ಎಂದರು.
ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು. ಅಸಮಾಧಾನಗೊಳ್ಳುವ ಪಕ್ಷದವರು ಉನ್ನತ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ನ್ಯಾಯಾಲಯದ ತೀರ್ಪಿಗೆ ಯಾವುದೇ ರೀತಿಯ ವಿವಾದಗಳು ಹುಟ್ಟಬಾರದು. ಸಮಸ್ಯೆಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ನಾವು ವಿರೋಧಿಸುತ್ತೇವೆ ಎಂದು ವಿವರಣೆ ನೀಡಿದರು.