ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ- ತೀರ್ಪು ಮುಂದೂಡಿಕೆಯಿಲ್ಲ | ಕಲ್ಯಾಣ್ ಶೋ ಫ್ಲಾಪ್ (Allahabad HC | Ayodhya verdict | Ram Mandir | Kalyan Singh)
Bookmark and Share Feedback Print
 
ರಾಜಕೀಯ ಮೈಲೇಜ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಭಾರತೀಯರ ಶ್ರದ್ಧಾಕೇಂದ್ರ ಅಯೋಧ್ಯೆಗೆ ಹೊರಟಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಜನಬೆಂಬಲವಿಲ್ಲದೆ ತೀವ್ರ ನಿರಾಸೆ ಅನುಭವಿಸಿರುವ ಹೊತ್ತಿಗೆ ಅತ್ತ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಮುಂದೂಡಲು ನಿರಾಕರಿಸಿದೆ. ಹಾಗಾಗಿ ಸೆಪ್ಟೆಂಬರ್ 24ರಂದೇ ಅಯೋಧ್ಯೆ ಒಡೆತನದ ತೀರ್ಪು ಹೊರ ಬೀಳಲಿದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ವಿಶೇಷ ಪೀಠವು ಸೆಪ್ಟೆಂಬರ್ 24ರಂದು ನೀಡಲು ಉದ್ದೇಶಿಸಿರುವ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ - ಬಾಬ್ರಿ ಮಸೀದಿ ವಿವಾದಿತ ಸ್ಥಳದ ಒಡೆತನ ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಸಲ್ಲಿಸಲಾಗಿದ್ದ ಮೂರೂ ಮನವಿಗಳನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ಮೊದಲ ಮನವಿಯನ್ನು ಸಲ್ಲಿಸಿದ್ದು ರಮೇಶ್ ಚಂದ್ರ ತ್ರಿಪಾಠಿ. ಸಮಾಜದಲ್ಲಿ ಕ್ಷೋಭೆ ಕಾಣಿಸಿಕೊಳ್ಳಬಹುದು, ಹಿಂಸಾಚಾರಗಳು ಉದ್ಭವಿಸಬಹುದು ಎಂಬ ಮಾಧ್ಯಮ ವರದಿಗಳು ಹೇಳಿರುವುದರಿಂದ ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಹೈಕೋರ್ಟಿಗೆ ಮನವಿ ಮಾಡಿದ್ದರು.

ತೀರ್ಪನ್ನು ಮುಂದಕ್ಕೆ ಹಾಕಬೇಕೆಂದು ಮನವಿ ಮಾಡಿರುವ ತ್ರಿಪಾಠಿಗೆ 10 ಲಕ್ಷ ರೂಪಾಯಿ ದಂಡವನ್ನೂ ಕೋರ್ಟ್ ಹೇರಿದೆ.

'ತೀರ್ಪನ್ನು ಮುಂದಕ್ಕೆ ಹಾಕಲು ಪ್ರಕರಣಕ್ಕೆ ಸಂಬಂಧಪಟ್ಟ ಪಕ್ಷದವರು ಸಿದ್ಧರಿದ್ದಾರೆಯೇ ಎಂದು ನ್ಯಾಯಾಲಯ ಬಯಸಿತ್ತು. ಆದರೆ ಯಾರೊಬ್ಬರೂ ಮುಂದೂಡಬೇಕೆಂದು ಬಯಸುತ್ತಿಲ್ಲ. ಹಾಗಾಗಿ ಈ ಸಂಬಂಧ ಮನವಿ ಮಾಡಿಕೊಂಡಿರುವ ತ್ರಿಪಾಠಿಯವರಿಗೆ 10 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಈ ತೀರ್ಪನ್ನು ಅವರು ಸುಪ್ರೀಂ ಕೋರ್ಟಿನಲ್ಲೂ ಪ್ರಶ್ನಿಸುವಂತಿಲ್ಲ' ಎಂದು ಹೈಕೋರ್ಟ್ ಆದೇಶ ನೀಡಿದೆ ಎಂದು ವಕೀಲ ಯು.ಸಿ. ಪಾಂಡೆ ತಿಳಿಸಿದ್ದಾರೆ.

ಬಹು ಧರ್ಮೀಯರನ್ನೊಳಗೊಂಡ ಲಕ್ನೋದ ಆರು ಸದಸ್ಯರ ತಂಡವು ಎರಡನೇ ಮನವಿ ಸಲ್ಲಿಸಿತ್ತು. ದೇಶದಲ್ಲಿ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಒತ್ತಾಯಿಸಲಾಗಿತ್ತು.

ಮೂರನೇ ಮನವಿಯನ್ನು ಸಲ್ಲಿಸಿರುವುದು ಹಿಂದೂ ಸೇವಾಸಂಸ್ಥೆಯೊಂದರ ಮುಖ್ಯಸ್ಥ ನಿರ್ಮೋಹಿ ಅಖಾರಾ. ಇವರು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಒಡೆತನ ಪ್ರಕರಣದಲ್ಲಿನ ಓರ್ವ ಕಕ್ಷಿಗಾರನೂ ಹೌದು. ವಿವಾದದ ಕುರಿತು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು 10 ದಿನಗಳ ಕಾಲಾವಕಾಶ ನೀಡಬೇಕೆಂದು ಇವರು ಶುಕ್ರವಾರ ಮನವಿ ಮಾಡಿಕೊಂಡಿದ್ದರು.

ಕಲ್ಯಾಣ್ ಸಿಂಗ್ ಫ್ಲಾಪ್ ಶೋ...
ಅಯೋಧ್ಯೆಗೆ ತೆರಳಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಯಾರು ಕೂಡ ತಡೆಯದೇ ಇರುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಅಲ್ಲದೆ ಅವರ ಬೆಂಬಲಕ್ಕೆ ಕೇವಲ 50 ಮಂದಿಯಷ್ಟೇ ಅಯೋಧ್ಯೆಯಲ್ಲಿ ಲಭ್ಯರಿದ್ದರು.

ಸಣ್ಣ ಗುಂಪಿನೊಂದಿಗೆ ಹೊರಟಿದ್ದ ಕಲ್ಯಾಣ್, ಅಯೋಧ್ಯೆಯಲ್ಲಿನ ಅಂಗಡಿ-ಮಳಿಗೆಗಳ ವ್ಯಾಪಾರಿಗಳನ್ನು ಸೆಳೆಯಲು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. 'ಜೈ ಶ್ರೀರಾಮ್', 'ಮಂದಿರ ಇಲ್ಲೇ ನಿರ್ಮಾಣವಾಗಬೇಕು' ಎಂಬಂತಹ ಘೋಷಣೆಗಳನ್ನು ಕೂಗಿದರೂ ಯಾರೊಬ್ಬರೂ ಬೆಂಬಲ ನೀಡಲಿಲ್ಲ ಎಂದು ವರದಿಗಳು ಹೇಳಿವೆ.

ಭಾರೀ ಭದ್ರತೆಯಿಂದಾಗಿ ನಮ್ಮ ವ್ಯವಹಾರವೇ ಪಾತಾಳಕ್ಕೆ ತಲುಪಿದೆ. ತೀರ್ಪು ಬರಲಿರುವ ಹಿನ್ನೆಲೆಯಲ್ಲಿ ಭೀತರಾಗಿರುವ ಭಕ್ತರು ದೇವಸ್ಥಾನಕ್ಕೆ ಬರುತ್ತಿಲ್ಲ ಎಂದು ಹೇಳಿರುವ ಇಲ್ಲಿನ ತಿಂಡಿ ಅಂಗಡಿಯೊಂದರ ಮಾಲಕ ಅಖಿಲೇಶ್ ಯಾದವ್, ಬಿಜೆಪಿಯ ಮಾಜಿ ನಾಯಕ 1992ರಲ್ಲಿ ಅಯೋಧ್ಯೆಗೆ ಸಾಕಷ್ಟು ಹಾನಿ ಮಾಡಿದ್ದಾರೆ; ಈಗ ಮತ್ತೆ ಯಾಕೆ ಸಮಸ್ಯೆ ಸೃಷ್ಟಿಸಲು ಅವರು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕಲ್ಯಾಣ್ ಅವರನ್ನು ತಡೆದು ವಿವಾದ ಸೃಷ್ಟಿಸುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕದ ಸ್ಥಳೀಯ ಆಡಳಿತವು, ಷರತ್ತುಬದ್ಧ ರೀತಿಯಲ್ಲಿ ಭೇಟಿಗೆ ಅವಕಾಶ ನೀಡಿತ್ತು. ಹೊರಗಡೆ ಕಲ್ಯಾಣ್ ಭಾಷಣ ಮಾಡಲು ಯತ್ನಿಸಿದರಾದರೂ, ಜನ ಸೇರಲೇ ಇಲ್ಲ ಎಂದು ಮಾಧ್ಯಮಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ