ಅಹಮದಾಬಾದ್, ಶನಿವಾರ, 18 ಸೆಪ್ಟೆಂಬರ್ 2010( 10:15 IST )
61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿರುವ ಮಾತಿದು. ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಮುಸ್ಲಿಮರು ಮಹತ್ವದ ಪಾತ್ರವಹಿಸಿದ್ದಾರೆ ಎಂದು ಹೇಳಿರುವ ಬಿಜೆಪಿ ಹಾರ್ಡ್‌ಕೋರ್ ರಾಜಕಾರಣಿ, ಶೇ.65ರಷ್ಟು ಅಲ್ಪಸಂಖ್ಯಾತರು ಸರಕಾರದ ಸಾಧನೆಯನ್ನು ಮೆಚ್ಚಿ ಮತ ಚಲಾಯಿಸಿದ್ದಾರೆ ಎಂದಿದ್ದಾರೆ.
ಈ ನಡುವೆ ಕತ್ಲಾಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಾನು ದಾಬಿ ಅವರು ಕಾಂಗ್ರೆಸ್‌ನ ಗೇಲಾ ಜಾಲಾ ಅವರನ್ನು 21,547 ಮತಗಳ ಭಾರೀ ಅಂತರದಿಂದ ಮಣಿಸಿ ದಾಖಲೆ ಸೃಷ್ಟಿಸಿರುವುದನ್ನು ಮೆಚ್ಚಿರುವ ಮುಸ್ಲಿಮರೂ ಸಂಭ್ರಮವನ್ನಾಚರಿಸಿದ್ದಾರೆ.
PR
ಮೋದಿಯವರ ಪ್ರತಿಕೃತಿಗೆ ಸಿಹಿ ತಿನ್ನಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಮುಸ್ಲಿಂ ಧರ್ಮೀಯರು ಆಚರಿಸಿದ್ದು, ಇದು ಕಾಂಗ್ರೆಸ್-ಸಿಬಿಐ ಮೈತ್ರಿಗಾದ ಸೋಲು ಎಂದು ಸ್ವತಃ ಮುಖ್ಯಮಂತ್ರಿಯವರು ಬಣ್ಣಿಸಿದ್ದಾರೆ.
ಇದರೊಂದಿಗೆ ಅಲ್ಪಸಂಖ್ಯಾತರ ಮತಕ್ಕಾಗಿ ತನ್ನನ್ನು ನಿರ್ಲಕ್ಷಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ಮೋದಿ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಉಪಚುನಾವಣೆಯಲ್ಲಿ ಶೇ.65ರಷ್ಟು ಮುಸ್ಲಿಂ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದಿರುವ ಮೋದಿ, ರಂಜಾನ್ ಪವಿತ್ರ ತಿಂಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅಲ್ಪಸಂಖ್ಯಾತರು ಸತ್ಯದ ಕಡೆ ನಿಂತಿದ್ದಾರೆ ಎಂದು ಬಣ್ಣಿಸಿದರು.
ಪವಿತ್ರ ರಂಜಾನ್ ತಿಂಗಳಿನ ಲಾಭ ಬಿಜೆಪಿಗೆ ಲಭಿಸಿದೆ ಎನ್ನುವುದು ಮೋದಿ ಅಭಿಮತ. ಮುಸ್ಲಿಮರು ಪ್ರಾಬಲ್ಯವಿರುವ ಬೂತ್‌ಗಳಲ್ಲಿ ನಮಗೆ ಅಮೋಘ ಬೆಂಬಲ ಸಿಕ್ಕಿದೆ. ರಂಜಾನ್ ತಿಂಗಳ ಸನಿಹದಲ್ಲಿ ಚುನಾವಣೆ ನಡೆದಿರುವುದರಿಂದ ಆ ಸಂದರ್ಭದಲ್ಲಿ ಪ್ರತಿಯೊಬ್ಬರೂ ನ್ಯಾಯದ ಪರವಾಗಿ ಚಿಂತಿಸುತ್ತಾರೆ. ಅದರ ಲಾಭ ನಮಗಾಗಿದೆ ಎಂದಿದ್ದಾರೆ.
ಗುಜರಾತಿಗೆ ಮಸಿ ಬಳಿದಿರುವ ಮಂದಿಯನ್ನು ರಾಜ್ಯದ ಮುಸ್ಲಿಮರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅವರೂ ಶಾಂತಿ ಮತ್ತು ಪ್ರಗತಿಯನ್ನು ಬಯಸುತ್ತಿದ್ದಾರೆ ಎಂಬುದರ ಸ್ಪಷ್ಟತೆ ಈ ಗೆಲುವಿನಲ್ಲಿ ಸಾಬೀತಾಗಿದೆ. ಈ ಪ್ರವೃತ್ತಿ ಸ್ಥಳೀಯ ಚುನಾವಣೆಗಳಲ್ಲೂ ಮುಂದುವರಿಯಲಿದೆ ಎಂದು ಕೇಸರಿ ಕುರ್ತಾದೊಂದಿಗೆ ಮಿಂಚುತ್ತಿದ್ದ ಕೇಸರಿ ಪಕ್ಷದ ಉನ್ನತ ನಾಯಕ ಅಭಿಪ್ರಾಯಪಟ್ಟರು.
ಅದೇ ಹೊತ್ತಿಗೆ ಕಾಂಗ್ರೆಸ್ಸಿಗೂ ಮೋದಿ ಎಚ್ಚರಿಕೆ ರವಾನಿಸಿದರು. 'ಗುಜರಾತ್ ಮತದಾರರು ಕಾಂಗ್ರೆಸ್-ಸಿಬಿಐ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ' ಎಂದು ಇತ್ತೀಚಿನ ಅಮಿತ್ ಶಾ ಬಂಧನ ಪ್ರಕರಣವನ್ನು ಉಲ್ಲೇಖಿಸುತ್ತಾ ತಿಳಿಸಿದರು.
ನಿನ್ನೆಯಷ್ಟೇ ಕಾಂಗ್ರೆಸ್ ಭದ್ರಕೋಟೆ ಕತ್ಲಾಲ್‌ನಲ್ಲಿ ಗೆಲುವು ಸಾಧಿಸಿದ ನಂತರ 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಇಲ್ಲಿರುವ ಕಾಂಗ್ರೆಸ್ ಶಾಸಕರು ಕೇವಲ 54. ಇತರೆ ಪಕ್ಷಗಳ ಪಾಲು ಆರು.
ಬಿಜೆಪಿಯ ವಕ್ತಾರೆ ನಿರ್ಮಲಾ ಸೀತಾರಾಮನ್ ಕೂಡ ಬಿಜೆಪಿಯ ಗೆಲುವು ಕಾಂಗ್ರೆಸ್‌ಗಾದ ಮುಖಭಂಗ ಎಂದಿದ್ದಾರೆ. ಗುಜರಾತಿನಲ್ಲಿ ರಾಜಕೀಯ ಲಾಭ ಪಡೆಯಲು ಸಿಬಿಐ ದುರ್ಬಳಕೆ ಸೇರಿದಂತೆ ಹತ್ತು ಹಲವು ವಾಮಮಾರ್ಗಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಕಪಾಳಕ್ಕೆ ಮತದಾರರು ಬಾರಿಸಿದ್ದಾರೆ ಎಂದು ಅವರು ವರ್ಣಿಸಿದ್ದಾರೆ.