ಮುಂದಿನ ತಿಂಗಳು ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿರುವಂತೆಯೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ಆಘಾತಕಾರಿ ಘಟನೆಗಳು ತೀವ್ರ ಕಳವಳಕ್ಕೆ ಎಡೆಮಾಡಿಕೊಟ್ಟಿದೆ.
ಮೊದಲು ನವದೆಹಲಿಯ ಜಾಮಾ ಮಸೀದಿಯ ಸಮೀಪ ಟೂರಿಸ್ಟ್ ಬಸ್‌ವೊಂದಕ್ಕೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಗಾಯಗೊಂಡಿದ್ದರು.
ಇದಾದ ಬೆನ್ನಲ್ಲೇ ಜಾಮಾ ಮಸೀದಿ ಸಮೀಪವೇ ಕಾರೊಂದು ಸ್ಫೋಟಿಸಿರುವುದು ಮತ್ತಷ್ಟು ಭದ್ರತಾ ಕಳವಳಕ್ಕೆ ಕಾರಣವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸಿದೆ.
ಅದೇ ವೇಳೆ ಕಾರಿನ ಸಮೀಪ ಸ್ಫೋಟಕ ವಸ್ತು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ. ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿಯೇ ನಡೆಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ಮುಂದುವರಿಸಲಾಗಿದೆ. ಸೂಕ್ಷ್ಮ್ಯ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ವಾಣಿಜ್ಯ ನಗರಿ ಮುಂಬೈ ನಗರದಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಒಟ್ಟಾರೆಯಾಗಿ ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಕರಿನೆರಳು ಬೀರತೊಡಗಿದೆ. ಈ ಪ್ರತಿಷ್ಠಿತ ಟೂರ್ನಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ಸಂಚು ರೂಪಿಸಿರಬಹುದೇ ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ.