ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿಗೆ ನಾನೇ ಕಾರಣ, ಪಾಕಿಸ್ತಾನವಲ್ಲ; ಬಂಧು (Azad Hind Sena | Ujjwal Nikam | Ajmal Kasab | Mumbai attacks)
Bookmark and Share Feedback Print
 
2008ರ ಮುಂಬೈ ದಾಳಿಗೆ ಪಾಕಿಸ್ತಾನ ಕಾರಣವಲ್ಲ, ನಾನು ಎಂದಿರುವ ಆಜಾದ್ ಹಿಂದ್ ಸೇನೆಯ ಕಾರ್ಯಕರ್ತ ಬಂಧು ಶಿಂಗ್ರೆಯ ವಿರುದ್ಧ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಆವರಣದಿಂದ ಹೊರದಬ್ಬಲು ಪೊಲೀಸರಿಗೆ ಆದೇಶ ನೀಡಿದೆ.

ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಬಾಂಬೆ ಹೈಕೋರ್ಟ್‌ಗೆ ತೆರಳಿದ್ದ ಆಜಾದ್ ಹಿಂದ್ ಸೇನೆಯ ಕಾರ್ಯಕರ್ತ, ಸರಕಾರಿ ವಕೀಲ ಉಜ್ವಲ್ ನಿಕ್ಕಂ ವಿರುದ್ಧವೂ ಗಂಭೀರ ಆರೋಪ ಮಾಡಿದರು.

ಉಜ್ವಲ್ ನಿಕ್ಕಂ ಅವರು ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ ನೇತೃತ್ವದ ತಂಡದ ಸದಸ್ಯ ಎಂದು ಬಂಧು ಆರೋಪಿಸಿದರು. ಬೆನ್ನಿಗೆ ಆ ದಾಳಿಯ ಹಿಂದಿರುವುದು ಪಾಕಿಸ್ತಾನವಲ್ಲ, ನಾನು ಎಂದು ತದ್ವಿರುದ್ಧ ಹೇಳಿಕೆಗಳನ್ನು ನೀಡಿದರು.

ಕಸಬ್‌ಗೆ ವಿಶೇಷ ನ್ಯಾಯಾಲಯವು ವಿಧಿಸಿರುವ ಮರಣ ದಂಡನೆಯನ್ನು ಖಚಿತಪಡಿಸುವ ಸಂಬಂಧ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಧು ವಾದಕ್ಕೆ ಅವಕಾಶ ನೀಡದ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಪೀಠವು, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತು.

ನ್ಯಾಯಾಲಯದಲ್ಲಿ ಇಂತಹ ಗಂಭೀರ ಆರೋಪ ಮಾಡಿರುವುದನ್ನು ಸರಕಾರಿ ವಕೀಲ ಉಜ್ವಲ್ ನಿಕ್ಕಂ ಕೂಡ ತೀವ್ರವಾಗಿ ಆಕ್ಷೇಪಿಸಿ ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೆ ಇಂತಹ ನಿಷ್ಪ್ರಯೋಜಕ ಅರ್ಜಿಗಳ ಸಲ್ಲಿಕೆಯ ಮೇಲೆ ಹೈಕೋರ್ಟಿನ ಮತ್ತೊಂದು ಪೀಠವು ನಿಷೇಧ ಹೇರಿರುವ ವಿಚಾರವನ್ನೂ ಪ್ರಸ್ತಾಪಿಸಿದರು.

ವಂದೇ ಮಾತರಂ ಎಂದೇ ಮಾತು ಆರಂಭಿಸಿದ ಆಜಾದ್ ಹಿಂದ್ ಸೇನೆಯ ಕಾರ್ಯಕರ್ತ ಬಂಧು, ದಯವಿಟ್ಟು ನನ್ನನ್ನು ಮಾತನಾಡಲು ಬಿಡಿ; ಇದು ಸಾಮಾನ್ಯ ವಿಚಾರವಲ್ಲ. ಕಸಬ್‌ನನ್ನು ಈಗಲೇ ನೇಣಿಗೆ ಹಾಕಿ. ಆತನ ವಿಚಾರಣೆಗಾಗಿ ಯಾಕೆ ಕಾಯುತ್ತಿದ್ದೀರಿ ಎಂದು ಪ್ರಶ್ನಿಸಿದರು. ನ್ಯಾಯಾಲಯದ ಆದೇಶದಂತೆ ತಕ್ಷಣವೇ ಆ ಕಾರ್ಯಕರ್ತನನ್ನು ಪೊಲೀಸರು ಕೋರ್ಟ್ ಆವರಣದಿಂದ ಹೊರ ದಬ್ಬಿದರು.

ಅಲ್ಲದೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಏನಾದರೂ ನ್ಯಾಯಾಲಯಕ್ಕೆ ಬಂದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ನ್ಯಾಯಮೂರ್ತಿಗಳು ಬಂಧುವಿಗೆ ಎಚ್ಚರಿಕೆ ರವಾನಿಸಿದರು.

ಆಜಾದ್ ಹಿಂದ್ ಸೇನೆಯನ್ನು (ಇಂಡಿಯನ್ ನ್ಯಾಷನಲ್ ಆರ್ಮಿ) ಸುಭಾಷ್ ಚಂದ್ರ ಬೋಸ್ 1942ರಲ್ಲಿ ಸ್ಥಾಪಿಸಿದ್ದರು. ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಇದು ಮಹತ್ವದ ಪಾತ್ರವಹಿಸಿತ್ತು.

ಕಸಬ್ ಮನವಿಗೆ ಕಾಯುವುದಿಲ್ಲ...
ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧದ ಕಸಬ್ ಮೇಲ್ಮನವಿಗೆ ಇನ್ನಷ್ಟು ಕಾಯುವುದು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಗಲ್ಲು ಶಿಕ್ಷೆ ಖಚಿತಪಡಿಸುವ ವಿಚಾರಣೆಯನ್ನು ಅಕ್ಟೋಬರ್ 11 ಅಥವಾ 18ರಿಂದ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಜೈಲಿನಿಂದ ಹೈಕೋರ್ಟಿಗೆ ಬರುವುದು ತನ್ನ ಜೀವಕ್ಕೆ ಅಪಾಯವಾಗಬಹುದು ಎಂಬುದು ಪಾಕಿಸ್ತಾನಿ ಭಯೋತ್ಪಾದಕ ಹೇಳುತ್ತಿದ್ದಾನೆ ಎಂದು ಈ ಸಂದರ್ಭದಲ್ಲಿ ನಿಕ್ಕಂ ಹೇಳಿದಾಗ, ಆತನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬಹುದು ಎಂದು ನ್ಯಾಯಾಲಯ ತಿಳಿಸಿತು.

ಕಸಬ್ ಪರ ನ್ಯಾಯವಾದಿಗಳಿಗೆ ನೀಡಿರುವ 60 ದಿನಗಳ ಕಾಲಾವಧಿ ಮೀರಿ ಹೋಗಿದೆ. ಮತ್ತೆ ಮತ್ತೆ ಕಾಲಾವಕಾಶ ನೀಡಲಾಗದು ಎಂದಿರುವ ನ್ಯಾಯಮೂರ್ತಿಗಳು, ಅಕ್ಟೋಬರ್ ತಿಂಗಳಲ್ಲಿ ವಿಚಾರಣೆ ಆರಂಭಿಸಲಾಗುತ್ತದೆ. ಈ ನಡುವೆ ಕಸಬ್ ಮೇಲ್ಮನವಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

ಕಾನೂನಿನ ಪ್ರಕಾರ ಮೇಲ್ಮನವಿಗಾಗಿ ಕಾಯಬೇಕಾದ ಅಗತ್ಯವಿಲ್ಲ. ನಿಮ್ಮಲ್ಲಿ ನಾವು ತಪ್ಪು ಹುಡುಕುತ್ತಿಲ್ಲ. ಆದರೆ ನೀವು ತೊಡಕುಂಟು ಮಾಡಿದ್ದನ್ನು ಎದುರಿಸಬೇಕಾಗಬಹುದು. ಆದರೆ ನಾವು ಇನ್ನೂ ಕಾಯುವುದಿಲ್ಲ ಎಂದು ಪೀಠ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ