ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು; ಲಾಠಿ ಸಂಗ್ರಹ | ಕರ್ನಾಟಕವೂ ಸೂಕ್ಷ್ಮ (Lathi | Ayodhya verdict | Uttar Pradesh | Karnataka)
Bookmark and Share Feedback Print
 
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಸೂಕ್ಷ್ಮ ಎಂದು ಪರಿಗಣಿಸಿರುವ ಕೇಂದ್ರ ಸರಕಾರವು ಸೂಕ್ತ ಭದ್ರತೆಗೆ ಸೂಚನೆ ನೀಡಿದೆ. ಅತ್ತ ಉತ್ತರ ಪ್ರದೇಶ ಪೊಲೀಸರು ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಲಾಠಿ ಸಂಗ್ರಹದಲ್ಲಿ ತೊಡಗಿದ್ದಾರೆ.

ಸಮೂಹ ನಿಯಂತ್ರಣಕ್ಕಾಗಿ ಅತಿ ಹೆಚ್ಚು ಬಳಕೆಯಲ್ಲಿರುವ ಅಸ್ತ್ರವೆಂದರೆ ಲಾಠಿ. ಸೆಪ್ಟೆಂಬರ್ 24ರಂದು ಶುಕ್ರವಾರ ಅಪರಾಹ್ನ 3.30ಕ್ಕೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಕುರಿತ ಮಹತ್ವದ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
PTI

ಉತ್ತರ ಪ್ರದೇಶ ಸರಕಾರವು ಕೇವಲ ಲಾಠಿಗಳ ಖರೀದಿಗೆಂದೆ 72.5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ರಾಜ್ಯ ಪೊಲೀಸರು ಆಧುನಿಕ ಶಸ್ತ್ರಾಸ್ತ್ರ ಹೊಂದಿದ್ದರೂ, ಜನಸಮೂಹ ನಿಯಂತ್ರಣ ವಿಚಾರದಲ್ಲಿ ಜನಪ್ರಿಯವಾಗಿರುವ ಲಾಠಿಯ ಕೊರತೆ ಎದುರಿಸುತ್ತಿದೆ. ಹಾಗಾಗಿ ಸೆಪ್ಟೆಂಬರ್ 24ಕ್ಕೆ ಮೊದಲು ಲಾಠಿ ಖರೀದಿಸಿ ಪೊಲೀಸರಿಗೆ ಹಂಚಲು ನಿರ್ಧರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಸರಕಾರ ಮಂಜೂರು ಮಾಡಿರುವ 72.5 ಕೋಟಿ ರೂಪಾಯಿಗಳಲ್ಲಿ 50 ಕೋಟಿ ಪೊಲೀಸ್ ಪಡೆಗೆ, 16 ಕೋಟಿ ಗೃಹರಕ್ಷಕ ದಳಕ್ಕೆ ಮತ್ತು 6.5 ಕೋಟಿ ರೂ.ಗಳು ಪ್ರಾಂತೀಯ ರಕ್ಷಾ ದಳಕ್ಕೆ ಹಂಚಲಾಗಿದೆ.

ಈ ಹಣದಲ್ಲಿ ಕೇವಲ ಲಾಠಿ ಮಾತ್ರ ಖರೀದಿಸುವುದಲ್ಲ. ಲಾಠೀ ಚಾರ್ಜ್ ಸಂದರ್ಭದಲ್ಲಿ ಬಳಕೆಯಾಗುವ ಇತರ ಪರಿಕರಗಳನ್ನು ಕೂಡ ಖರೀದಿ ಮಾಡಲಾಗುತ್ತದೆ. ಮುಖ ಕವಚಗಳು, ದೇಹ ರಕ್ಷಕಗಳು ಮತ್ತು ಗುರಾಣಿಗಳು ಇದರಲ್ಲಿ ಸೇರಿವೆ.

ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಲಾಠಿಗಳು ಮತ್ತು ಲಾಠೀ ಚಾರ್ಜಿಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಲಾಗುತ್ತದೆ. ಸಾಮಾನ್ಯವಾಗಿ ಮರದಿಂದ ತಯಾರಿಸುವ ಒಂದು ಲಾಠಿಯ ಬೆಲೆ 300 ರೂಪಾಯಿ. ಪ್ಲಾಸ್ಟಿಕ್ ಲಾಠಿಗೆ 500ರಿಂದ 700 ರೂಪಾಯಿಗಳಿವೆ.

ಮುಖ ರಕ್ಷಕವೊಂದಕ್ಕೆ 450 ರೂಪಾಯಿ, ದೇಹ ರಕ್ಷಕಕ್ಕೆ 2,000 ರೂಪಾಯಿ ಮತ್ತು ಗುರಾಣಿಗೆ 1,600 ರೂಪಾಯಿಗಳಿವೆ. ಸಾಮಾನ್ಯವಾಗಿ ಮರದ ಲಾಠಿಯಿಂದ ಹೆಚ್ಚಿನ ಗಾಯಗಳಾಗುವುದರಿಂದ ಪ್ಲಾಸ್ಟಿಕ್ ಲಾಠಿಗೆ ನಾವು ಒಲವು ತೋರಿಸುತ್ತಿದ್ದೇವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

32 ಸೂಕ್ಷ್ಮ ಪ್ರದೇಶಗಳು...
ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕಗಳು ಸೇರಿದಂತೆ ದೇಶದಲ್ಲಿ ಒಟ್ಟಾರೆ 32 ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರ ಸರಕಾರ ಗುರುತಿಸಿದ್ದು, ಎಲ್ಲಾ ರಾಜ್ಯ ಸರಕಾರಗಳು ಸೂಕ್ತ ಭದ್ರತೆಯನ್ನು ಏರ್ಪಡಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಸೂಚನೆ ನೀಡಿದೆ.

ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ 32 ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿ ನಾಲ್ಕು ಸ್ಥಳಗಳು ಉತ್ತರ ಪ್ರದೇಶಕ್ಕೆ ಸೇರಿವೆ. ಆದರೆ ಇತರ ರಾಜ್ಯಗಳ ಕುರಿತು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ತೀರ್ಪು ಯಾರ ಪರವಾಗಿ ಬಂದರೂ ಹಿಂಸಾಚಾರ ನಡೆಯುವ ಸಾಧ್ಯತೆಗಳಿರುವುದರಿಂದ ರಾಜ್ಯ ಸರಕಾರಗಳು ಕೇಂದ್ರ ಪಡೆಗಳ ನೆರವಿನೊಂದಿಗೆ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಪಡೆಗಳನ್ನು ನಿಯೋಜನೆ ಮಾಡಬೇಕು. ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಕೇಂದ್ರ ಸಲಹೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ