ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇವರ ಹೆಸರಲ್ಲಿ ದೆಹಲಿ ದಾಳಿ; ಮುಂಬೈಯಲ್ಲಿ ಇಬ್ಬರ ಸೆರೆ (Jama Masjid firing | Indian Mujahideen | Mumbai | Commonwealth Games)
Bookmark and Share Feedback Print
 
ದೇವರ ಹೆಸರಿನಲ್ಲಿ ನಡೆಸಿರುವ ದಾಳಿ ಎಂದು ದೆಹಲಿ ದಾಳಿಯನ್ನು ಉಲ್ಲೇಖಿಸದೆ ಎರಡೆರಡು ಕಡೆ ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಪಟ್ಟಂತೆ ರವಾನೆಯಾಗಿರುವ ಇ-ಮೇಲ್ ಮುಂಬೈಯಿಂದ ಬಂದಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಮಾಡಲಾಗಿದ್ದ ಇ-ಮೇಲ್ ರವಾನೆಯಾಗಿದ್ದು ಮುಂಬೈಯಿಂದ. ಮೊಬೈಲ್ ಫೋನ್ ಬಳಸಿ ಬೊರಿವಿಲಿಯಿಂದ ಮೇಲ್ ಮಾಡಲಾಗಿತ್ತು. ಈ ರೀತಿ ಇ-ಮೇಲ್ ಮಾಡಲು ನೂತನ ಸಿಮ್ ಮತ್ತು ಫೋನನ್ನು ಖರೀದಿಸಲಾಗಿತ್ತು. ಎರಡೂ ಕಡೆ ನಕಲಿ ಹೆಸರು ಮತ್ತು ವಿಳಾಸಗಳನ್ನು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ ಬಾಂಬ್ ಸ್ಫೋಟ
PTI

ಸಿಮ್ ಮತ್ತು ಫೋನ್‌ಗಳಿಗೆ ನೀಡಲಾಗಿದ್ದ ವಿಳಾಸವನ್ನು ಹುಡುಕುತ್ತಾ ಹೋದ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು, ಅಂತಹ ಯಾವುದೇ ವ್ಯಕ್ತಿ ಅಥವಾ ವಿಳಾಸಗಳು ಕಂಡು ಬಂದಿಲ್ಲ ಎಂದಿದ್ದಾರೆ.

ಆದರೂ ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ.

ಭಾನುವಾರ ದೆಹಲಿಯ ಜಾಮಾ ಮಸೀದಿಯ ಹೊರಗಡೆ ನಡೆದ ಶೂಟೌಟ್‌ನಲ್ಲಿ ಇಬ್ಬರು ತೈವಾನ್ ಪ್ರಜೆಗಳು ಗಾಯಗೊಂಡಿದ್ದರು. ಎರಡು ಬೈಕುಗಳಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಇದರ ಬೆನ್ನಿಗೆ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಇ-ಮೇಲ್‌ಗಳನ್ನು ಮಾಧ್ಯಮ ಕಚೇರಿಗಳಿಗೆ ರವಾನಿಸಲಾಗಿತ್ತು.

ದೆಹಲಿಯಲ್ಲಿನ ದಾಳಿಯನ್ನು ಉಲ್ಲೇಖಿಸದೆ ಬಿಬಿಸಿ ಹಿಂದಿ ಕಚೇರಿಗೆ ಇ-ಮೇಲ್‌ನಲ್ಲಿ, 'ಅಲ್ಲಾಹ್ ಹೆಸರಿನ ದಾಳಿ ಆತೀಫ್ ಅಮೀನ್ ಮತ್ತು ಮೊಹಮ್ಮದ್ ಸಾಜಿದ್ ಅವರಿಗೆ ಅರ್ಪಿಸುತ್ತಿರುವ ಶ್ರದ್ಧಾಂಜಲಿ' ಎಂದು ಬರೆಯಲಾಗಿತ್ತು.

ದುಷ್ಕರ್ಮಿಗಳು ನಮೂದಿಸಿದ ಅಮೀನ್ ಮತ್ತು ಸಾಜಿದ್ ಇಬ್ಬರೂ 2008ರ ಸೆಪ್ಟೆಂಬರ್ 19ರ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಪೊಲೀಸರ ಕೈಯಲ್ಲಿ ಹತರಾಗಿದ್ದರು.

ಅಮೋನಿಯಂ ನೈಟ್ರೇಟ್ ಬಳಕೆ...
ಜಾಮಾ ಮಸೀದಿ ಬಳಿ ಶೂಟೌಟ್ ನಡೆದ ಎರಡು ಗಂಟೆಗಳ ಬಳಿಕ ಅಲ್ಲೇ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಸ್ಫೋಟಕ್ಕಾಗಿ ಆರ್‌ಡಿಎಕ್ಸ್ ಅಥವಾ ಡಿಟೋನೇಟರ್ ಬಳಸಿರಲಿಲ್ಲ. ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು. ಸ್ಫೋಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣವನ್ನು ದೆಹಲಿ ಪೊಲೀಸರ ವಿಶೇಷ ದಳಕ್ಕೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮಾರುತಿ 800 ಕಾರಿನಲ್ಲಿ ಈ ಸ್ಫೋಟಕವನ್ನು ಇಡಲಾಗಿತ್ತು. ಸ್ಫೋಟಕಕ್ಕೆ ಟೈಮರ್ ಕೂಡ ಅಳವಡಿಸಲಾಗಿತ್ತು. ದುಷ್ಕರ್ಮಿಗಳ ತಂತ್ರ ವಿಫಲವಾಗಬಾರದೆಂಬ ಕಾರಣಕ್ಕೆ ಎರಡೆರಡು ಟೈಮರ್‌ಗಳನ್ನು ಇಡಲಾಗಿತ್ತು. ಒಂದು ವಿಫಲವಾದರೂ ಮತ್ತೊಂದರಿಂದ ಯಶಸ್ಸು ಪಡೆಯಬೇಕು ಎನ್ನುವುದು ಅವರ ತಂತ್ರ. ಅಲ್ಲದೆ ಕಾರಿನ ಇಂಧನ ಟ್ಯಾಂಕಿನಲ್ಲಿ 20 ಲೀಟರ್ ಪೆಟ್ರೋಲ್ ತುಂಬಲಾಗಿತ್ತು.

ಆದರೆ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿರಲಿಲ್ಲ. ಹಾಗೆಲ್ಲಾದರೂ ಸ್ಫೋಟಗೊಳ್ಳುತ್ತಿದ್ದರೆ ಭಾರೀ ಹಾನಿಯಾಗುವ ಸಾಧ್ಯತೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ