ಆರು ತಿಂಗಳ ಮಗು ಸಾಗರ್‌ನನ್ನು ಮಡಿಲಲ್ಲಿ ಕೂರಿಸಿಕೊಂಡಿರುವ ಮನೀಷಾ ಗಾವಿತ್ ಬಾಟಲಿ ಹಾಲು ನೀಡುತ್ತಾಳೆ. ರಚ್ಚೆ ಹಿಡಿದು ಅಳುವಿಗೆ ಶುರು ಮಾಡಿದಾಗಲೆಲ್ಲ ಓಡೋಡಿ ಬಂದು ಅಪ್ಪಿ ಹಿಡಿದುಕೊಂಡು ಮುದ್ದಿಸುತ್ತಾಳೆ.
ಆದರೆ ಆ ಮಗು ಸಾಗರನ ತಾಯಿ ಮನೀಷಾ ಗಾವಿತ್ (30) ಅಲ್ಲ. ಗಂಡ ರಮೇಶ್ ಜತೆಗೂಡಿ ಮಗುವಿಗೆ 13 ದಿನ ತುಂಬುತ್ತಲೇ ಆರೈಕೆಗೆ ಶುರು ಮಾಡಿಕೊಂಡಿದ್ದಾರೆ. ಹೌದು, ಈ ಮಗುವನ್ನು ಖರೀದಿಸಿದ್ದಾರೆ. ಹೊಟ್ಟೆಗಿಲ್ಲ ಎಂದು ಅಲವತ್ತುಕೊಂಡ ತಾಯಿಯ ಕೈಗೆ 400 ರೂಪಾಯಿ ತುರುಕಿ ಮಗುವನ್ನು ಎತ್ತಿಕೊಂಡು ಬಂದಿದ್ದರು.
PR
ಇದು ನಡೆದಿರುವುದು ಮುಂಬೈಯಿಂದ 150 ಕಿಲೋ ಮೀಟರ್ ದೂರದಲ್ಲಿರುವ ಜವಾಹರ್ ಎಂಬಲ್ಲಿ. 28ರ ಹರೆಯದ ದೇವಕಿ ರಾಮು ತೊಕ್ರೆ ಎಂಬ ವಿಧವೆ ತನಗೇ ಹೊಟ್ಟೆಗೆ ಹಿಟ್ಟಿಲ್ಲವೆಂದಾಗ ಮಗುವನ್ನು ಸಾಗುವ ಬಗೆಯೆಂತು ಎಂದು ನೆನೆದು ಮಾರಿ ಬಿಟ್ಟಿದ್ದಳು.
ದೇವಕಿ ತೀರಾ ಬಡಕಲಾಗಿದ್ದಳು. ಜತೆಗೆ ಹಸಿವೆಯೆಂದು ಬಳಲುತ್ತಿದ್ದಳು. ಆಕೆಯ ಖರ್ಚಿಗೆಂದು 400 ರೂಪಾಯಿ ಕೊಟ್ಟು ಮಗುವನ್ನು ನಾವು ಪಡೆದುಕೊಂಡೆವು. ಮಗುವಿನ ತಾಯಿ ಸಂತೋಷದಿಂದಲೇ ಸಾಗರನನ್ನು ನಮಗೆ ಕೊಟ್ಟು ಹೊರಟು ಹೋದಳು. 13 ದಿನಗಳ ಮಗು ಸಾಗರನ ಮೈಯಲ್ಲಿ ಕೂಡ ಕಾಣುತ್ತಿದ್ದುದು ಎಲುಬು ಮಾತ್ರ. ಈತ ಖಂಡಿತಾ ಬದುಕಲಾರ ಎಂದು ಹಲವು ಗ್ರಾಮಸ್ಥರು ಹೇಳುತ್ತಿದ್ದರು. ಆದರೆ ಈಗ ನೋಡಿ, ಹೇಗಾಗಿದ್ದಾನೆ ಎಂದು ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾ ಮನೀಷಾ ಸಂದರ್ಶಕರನ್ನೇ ಪ್ರಶ್ನಿಸಿದ್ದಾಳೆ.
ಕಳೆದ 15 ವರ್ಷಗಳ ಹಿಂದೆಯೇ ಮದುವೆಯಾಗಿದ್ದರೂ ಮನೀಷಾ - ರಮೇಶ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹಾಗಾಗಿ ಅವರು ಮಗುವೊಂದನ್ನು ಬೇರೆಯವರಿಂದ ಪಡೆದುಕೊಳ್ಳಲು ತೀರ್ಮಾನಿಸಿದ್ದರು. ಇದನ್ನು ಯಾರ ಮೂಲಕವೋ ತಿಳಿದುಕೊಂಡಿದ್ದ ದೇವಕಿ ತನ್ನ ಮಗುವನ್ನು ದಂಪತಿಗೆ ಕೊಟ್ಟು ಹೋಗಿದ್ದಳು. ಅಂದು ಸಣಕಲಾಗಿದ್ದ ಮಗು ಸಾಗರನೀಗ ದಷ್ಟಪುಷ್ಟನಾಗಿದ್ದಾನೆ.
ದೇವಕಿಯು ಮಗು ಮಾರಾಟ ಮಾಡಿರುವುದು ಅಕ್ಕ-ಪಕ್ಕದವರಿಗೆ ಚೆನ್ನಾಗಿಯೇ ತಿಳಿದಿದೆ. ಈ ಕುರಿತು ಗ್ರಾಮಸ್ಥರೇ ಆಗಿರುವ ರಾಮಚಂದ್ರ ಎಂಬವರು ಹೇಳುವ ಮಾತನ್ನೇ ಕೇಳಿ.
'ಆ ವಿಧವಾ ಮಹಿಳೆ ತೀರಾ ಬಡವಿ. ಹಾಗಾಗಿ ತನ್ನ ಮಗುವನ್ನು ಯಾರಿಗಾದರೂ ಕೊಟ್ಟು ಬಿಡಬೇಕೆಂದು ಕಾಯುತ್ತಿದ್ದಳು. ಆಕೆಗೆ ಯಾವುದೇ ಆದಾಯದ ಮೂಲ ಇಲ್ಲದೇ ಇದ್ದ ಕಾರಣ ಹೊಟ್ಟೆಗಿಲ್ಲದೆ ಕೆಲವೇ ದಿನಗಳಲ್ಲಿ ಮಗು ಸಾಯಬೇಕಿತ್ತು. ಇದೆಲ್ಲ ನಮಗೆ ತಿಳಿದೇ ಇದ್ದ ಕಾರಣ ನಾವು ಆಕೆ ಮಗು ಮಾರಾಟ ಮಾಡುವುದನ್ನು ಆಕ್ಷೇಪಿಸಲಿಲ್ಲ' ಎಂದಿದ್ದಾರೆ.
ಆದರೆ ಈ ಕುರಿತು ಥಾಣೆ ಗ್ರಾಮಾಂತರ ಜಿಲ್ಲಾಧಿಕಾರಿ ವಿಜಯ್ ಜೋಷಿ ಮಾತ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇದೊಂದು ಅಚ್ಚರಿಯ ಸುದ್ದಿ. ನನಗಿದನ್ನು ನಂಬಲಾಗುತ್ತಿಲ್ಲ. ತಕ್ಷಣವೇ ಈ ಕುರಿತು ತನಿಖೆಗೆ ಆದೇಶ ನೀಡುತ್ತೇನೆ. ವಿಚಾರ ನಿಜವೇ ಆಗಿದ್ದಲ್ಲಿ ತಾಯಿ-ಮಗುವಿನ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳುತ್ತದೆ ಎಂದಿದ್ದಾರೆ.