ಅಯೋಧ್ಯೆ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತಾನು ಎರಡು ದಶಕಗಳ ಹಿಂದೆ ಕೈಗೊಂಡಿದ್ದ ಜನಪ್ರಿಯ ರಥಯಾತ್ರೆ ಸಂತೃಪ್ತಿಯನ್ನು ಒದಗಿಸಿದೆ ಎಂದಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಪ್ರಸಕ್ತ ತಾತ್ಕಾಲಿಕ ಮಂದಿರವಿರುವ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಒತ್ತು ನೀಡುವುದಾಗಿ ಹೇಳಿದರು.
1989ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ರಾಷ್ಟ್ರ ಜಾಗೃತಿ 'ರಥಯಾತ್ರೆ'ಗೆ ಮುನ್ನುಡಿ ಬರೆದಿದ್ದ ಅಡ್ವಾಣಿಯವರು ಲಕ್ನೋ ಪೀಠವು ನೀಡಿರುವ ತೀರ್ಪಿಗೆ ಬರುತ್ತಿರುವ ಟೀಕೆಗಳನ್ನು ತಳ್ಳಿ ಹಾಕಿದ್ದು, ಕಾನೂನು ಎತ್ತಿ ಹಿಡಿದಿರುವ ಒಂದೇ ಒಂದು ನಂಬಿಕೆಯ ಪ್ರಕರಣವಿದು ಎಂದು ಬಣ್ಣಿಸಿದರು.
ಅದೇ ಹೊತ್ತಿಗೆ ಫೈಜಾಬಾದ್‌ನ ಸರಯೂ ನದಿ ತಟದಲ್ಲಿರುವ ಕಟ್ಟಡದ ಹೊರಗೆ ಮುಸ್ಲಿಮರು ಮಸೀದಿಯನ್ನು ನಿರ್ಮಿಸಬಹುದಾಗಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯನ್ನು ಕೂಡ ಅಡ್ವಾಣಿ ಬೆಂಬಲಿಸಿದರು.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡುತ್ತಿದ್ದ ಅವರು, ಅಯೋಧ್ಯೆ ವಿಚಾರ ಬಂದಾಗಲೆಲ್ಲ ಎಚ್ಚರಿಕೆ ಹೇಳಿಕೆಗಳನ್ನು ನೀಡುತ್ತಿದ್ದರು. ತಪ್ಪಿಯೂ ಅವರ ಬಾಯಿಯಿಂದ ವಿವಾದಕ್ಕೆ ಆಸ್ಪದ ಕೊಡುವ ಮಾತುಗಳು ಹೊರಡುತ್ತಿರಲಿಲ್ಲ.
ಹೌದು, ನನಗೀಗ ಸಂತೃಪ್ತಿಯ ಭಾವ ಮೂಡಿದೆ. ಯಾಕೆಂದರೆ ರಾಮಮಂದಿರ ಚಳವಳಿ ವಾಸ್ತವದಲ್ಲಿ 1949ರಲ್ಲೇ ಹುಟ್ಟಿಕೊಂಡಿದ್ದರೂ 1989ರವರೆಗೆ ಬಿಜೆಪಿಯು ಅದರಲ್ಲಿ ಪಾಲ್ಗೊಂಡಿರಲಿಲ್ಲ ಎಂದು 1989ರಲ್ಲಿ ಸೋಮನಾಥ ದೇವಳದಿಂದ ಅಯೋಧ್ಯೆಗೆ ಕೈಗೊಂಡ ಯಾತ್ರೆಯ ಬಗ್ಗೆ ಕೇಳಿ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ಹಾದಿಯೇನು? ಬಿಜೆಪಿ ಮತ್ತು ಸಂಘ ಪರಿವಾರವು ಸೌಹಾರ್ದಯುತ ಪರಿಹಾರದ ಮಾತುಕತೆಯ ಹಾದಿಯನ್ನು ತುಳಿಯುವುದೇ ಎಂದಾಗ, 'ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಎರಡೂ ಸಮುದಾಯಗಳು ಮುಂದೆ ಬಂದು ಒಪ್ಪಂದವೊಂದನ್ನು ಮಾಡಿಕೊಳ್ಳುವುದು ನಡೆಯಬೇಕಿದೆ. ಏನಾಗುತ್ತದೋ ಅದನ್ನು ನಡೆಯಲು ಅನುವು ಮಾಡಿಕೊಡಬೇಕಿದೆ' ಎಂದರು.
ರಾಮ ಜನ್ಮಭೂಮಿ ಎಂದು ನಂಬಿರುವ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆನ್ನುವುದು ಲಕ್ಷಾಂತರ ಜನರ ಅಭಿಲಾಷೆ ಎನ್ನುವುದು ಸಂಶಯಾತೀತವಾಗಿ ನ್ಯಾಯಾಲಯದ ತೀರ್ಪಿನಲ್ಲಿ ಕೇಳಿ ಬಂದಿದೆ. ಆದರೆ ಇದು ಕೇವಲ ನ್ಯಾಯಾಲಯದ ತೀರ್ಮಾನವಾಗಿರದೆ, ಎರಡೂ ಸಮುದಾಯಗಳು ಜತೆಗೂಡಿ ಇಂತಹ ತೀರ್ಮಾನಕ್ಕೆ ಬಂದರೆ ಉತ್ತಮವಿರುತ್ತದೆ ಎಂದು ಅಭಿಪ್ರಾಯಪಟ್ಟರು.