ಸ್ವತಃ ಕಾಂಗ್ರೆಸ್‌ಗೇ ಕೆಲವೊಮ್ಮೆ ಮುಜುಗರ ಹುಟ್ಟಿಸುವ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಇದೀಗ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡಿದ್ದಾರೆ.
ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡು ನಿಷೇಧಕ್ಕೊಳಗಾಗಿರುವ ಮೂಲಭೂತವಾದಿ ಸಂಘಟನೆ ಸಿಮಿ ಮತ್ತು ಆರೆಸ್ಸೆಸ್ ನಡುವೆ ರಾಹುಲ್ ಹೋಲಿಕೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ದಿಗ್ವಿಜಯ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಆರೆಸ್ಸೆಸ್ ಮತ್ತು ಸಿಮಿಯ ನಡುವೆ ಹೋಲಿಕೆ ಮಾಡುವ ಸಂದರ್ಭದಲ್ಲಿ ರಾಹುಲ್ ಅವೆರಡೂ ಸಂಘಟನೆಗಳು ಬಹುತೇಕ ಒಂದೇ ರೀತಿಯ ಸಿದ್ಧಾಂತಗಳನ್ನು ಹೊಂದಿವೆ ಎಂದು ಹೇಳಿದ್ದರು ಎಂದು ವಿವರಿಸಿದರು.
ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ದಿಗ್ವಿಜಯ್ ಸಿಂಗ್ ಹಲವು ಉದಾಹರಣೆಗಳನ್ನು ನೀಡುತ್ತಾ ಹೋದರು. ಆರೆಸ್ಸೆಸ್ ದೇಶದ ಹಲವು ಭಾಗಗಳಲ್ಲಿ ನಡೆದ ಬಾಂಬ್ ಸ್ಫೋಟದಂತಹ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದರು.
1992ರಲ್ಲಿ ಬಿಜೆಪಿಯು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೀಮುಚ್‌ನಲ್ಲಿ ಹಿಂದೂ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ ಬಾಂಬುಗಳನ್ನು ತಯಾರಿಸುವ ಮೂಲಕ ಮೊದಲ ಬಾರಿ ಬಹಿರಂಗವಾಗಿತ್ತು ಎಂದರು.
ಸಿಮಿ ಮತ್ತು ಬಜರಂಗ ದಳಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರ ಪುರಾವೆಗಳನ್ನು ತಾನು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ನೀಡಿದ್ದೆ ಎಂದೂ ದಿಗ್ವಿಜಯ್ ತಿಳಿಸಿದರು.
ಆದರೆ ಕೇಂದ್ರ ಸರಕಾರವು ಕೇವಲ ಸಿಮಿಯ ಪುರಾವೆಗಳನ್ನು ಮಾತ್ರ ಸ್ವೀಕರಿಸಿತ್ತು. ಬಜರಂಗ ದಳದ ಬಗ್ಗೆ ನೀಡಲಾಗಿದ್ದ ಪುರಾವೆಗಳ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಎನ್‌ಡಿಎ ಸರಕಾರದತ್ತ ಬೆಟ್ಟು ಮಾಡಿದರು.
ಅಡ್ವಾಣಿಗೆ ಬುದ್ಧಿ ಹೇಳಿ.. ಅಯೋಧ್ಯೆ ತೀರ್ಪಿನ ಕುರಿತು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗ್ವತ್ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಇದು ಯಾರೊಬ್ಬರ ಗೆಲುವೂ ಅಲ್ಲ ಎಂದು ಅವರು ಹೇಳಿದ್ದರು. ಇದು ನನಗೆ ಸಂತಸ ತಂದಿದೆ. ಹಾಗಾಗಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮತ್ತು ರವಿ ಶಂಕರ್ ಪ್ರಸಾದ್ ಅವರಿಗೆ ಆರೆಸ್ಸೆಸ್ ಬುದ್ಧಿ ಹೇಳಬೇಕು ಎಂದು ದಿಗ್ವಿಜಯ್ ಸಲಹೆ ನೀಡಿದ್ದಾರೆ.
ಅಯೋಧ್ಯೆ ಕುರಿತು ಕೋಮು ಸಾಮರಸ್ಯ ಕೆಡಿಸುವಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಭಾಗ್ವತ್ ಅವರು ಈ ಇಬ್ಬರು ನಾಯಕರಿಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.