ಹೈದರಾಬಾದ್, ಶುಕ್ರವಾರ, 15 ಅಕ್ಟೋಬರ್ 2010( 19:47 IST )
ಕರ್ನಾಟಕದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಯತ್ನಗಳ ಹಿಂದೆ ಗಣಿಗಾರಿಕೆ ಲಾಬಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು, ಬಹುಮತ ಸಾಬೀತುಪಡಿಸುವುದರೊಂದಿಗೆ ಕಾಂಗ್ರೆಸ್-ಜೆಡಿಎಸ್ ಮತ್ತು ರಾಜ್ಯಪಾಲರಿಗೆ ಮುಖಭಂಗವಾಗಿದೆ ಎಂದಿದ್ದಾರೆ.
ಶುಕ್ರವಾರ ಹೈದರಾಬಾದಿನಲ್ಲಿ ಮಾತನಾಡುತ್ತಿದ್ದ ಅವರು, ಸರಕಾರ ಅಸ್ಥಿರಗೊಳಿಸಲು ನಡೆಸುತ್ತಿರುವ ಸಂಚಿನ ಹಿಂದಿನ ಸತ್ಯವನ್ನು ಹೊರಗೆಡವುವ ಸಲುವಾಗಿ ತನಿಖೆಯೊಂದನ್ನು ನಡೆಸಲಾಗುತ್ತದೆ ಎಂದರು.
ಇಡೀ ಗಣಿ ಮಾಲೀಕರು ಒಟ್ಟಾಗಿದ್ದಾರೆ ಎಂದು ಕೇಳಿ ತಿಳಿದಿದ್ದೇನೆ. ಇದಕ್ಕೆ ಕಾರಣ ರಾಜ್ಯ ಸರಕಾರವು ಕಬ್ಬಿಣದ ಅದಿರು ರಫ್ತು ಮೇಲೆ ನಿಷೇಧ ಹೇರಿದ್ದು. ಅದಿರು ರಫ್ತು ಮಾಡುವುದರಿಂದ ಗಣಿ ಮಾಲೀಕರಿಗೆ ಕೋಟಿಗಟ್ಟಲೆ ಹಣ ಹರಿದು ಬರುತ್ತಿತ್ತು ಎಂದು ನಾಯ್ಡು ವಿವರಣೆ ನೀಡಿದರು.
ಇದನ್ನು ನಾವು ಇಷ್ಟಕ್ಕೆ ಬಿಡುವುದಿಲ್ಲ. ಸರಕಾರ ಎಲ್ಲಾ ಸಂಕಷ್ಟಗಳಿಂದ ಹೊರ ಬಂದ ನಂತರ ಇಡೀ ವಿದ್ಯಮಾನಗಳ ಕುರಿತು ತನಿಖೆಗೆ ಆದೇಶ ನೀಡುತ್ತೇವೆ. ಕುತಂತ್ರ ರಾಜಕೀಯಕ್ಕೆ ಬಳಸಲು ಹಣ ನೀಡಿರುವುದು ಯಾರು ಎಂಬುದನ್ನು ಪತ್ತೆ ಹಚ್ಚುತ್ತೇವೆ. ಯಾವ ಮೂಲದಿಂದ ಯಾರಿಗೆಲ್ಲ ಹಣ ಬಂದಿದೆ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದರು.
ಪ್ರಸ್ತಾವಿತ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದಾಗ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಬ್ಬಿಣದ ಅದಿರು ರಫ್ತು ನಿಷೇಧದ ಕುರಿತು ಸರಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು ಎಂದರು.
ಎರಡನೇ ವಿಶ್ವಾಸ ಮತದಲ್ಲೂ ಬಹುಮತ ಸಾಬೀತುಪಡಿಸಿದ ಯಡಿಯೂರಪ್ಪ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯ್ಡು, ಇದು ಪ್ರಜಾಪ್ರಭುತ್ವಕ್ಕೆ ಲಭಿಸಿದ ಜಯ; ಕಾಂಗ್ರೆಸ್-ಜೆಡಿಎಸ್ ಮತ್ತು ಅವರ ಸಹ ಪಿತೂರಿದಾರ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗಾದ ಮುಖಭಂಗ ಎಂದರು.
ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ತೀರ್ಪು ಐತಿಹಾಸಿಕ ಎಂದೂ ಅವರು ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು.