ತನ್ನ ಪತ್ನಿ ವೇಶ್ಯೆ ಎಂದು ಇಂಟರ್ನೆಟ್‌ನಲ್ಲಿ ಬಿಂಬಿಸಿದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಯೊಬ್ಬನನ್ನು ಚೆನ್ನೈ ಪೊಲೀಸರು ಜೈಲಿಗಟ್ಟಿದ್ದಾರೆ.
34ರ ಹರೆಯದ ಮಹೇಶ್ ಎಂಬಾತನೇ ಈ ಆರೋಪಿ. ನುಂಗಂಬಾಕಂ ನಿವಾಸಿಯಾಗಿರುವ ಈತ ತನ್ನ ಪತ್ನಿ ಸರೋಜಾ (28) ಎಂಬಾಕೆಯ ಹೆಸರನ್ನು ಇಂಟರ್ನೆಟ್‌ನಲ್ಲಿ ದುರುಪಯೋಗಪಡಿಸಿಕೊಂಡಿದ್ದ. ಇದಕ್ಕೆ ಸಹಕಾರ ಪಡೆದುಕೊಂಡದ್ದು ತನ್ನ ಕಚೇರಿಯ ಮತ್ತೊಬ್ಬ ಮಹಿಳೆಯನ್ನು.
ಆರೋಪಿಗಳಾದ ಮಹೇಶ್ ಮತ್ತು ಸುಭಾಷಿಣಿ (27) ಎಂಬಾಕೆಯನ್ನು ಬಂಧಿಸಲಾಗಿದೆ. ಸರೋಜಾ ಅವರ ಇ-ಮೇಲ್ ಐಡಿ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಲಾಗಿನ್ ಐಡಿಗಳನ್ನು ಬಳಸಿಕೊಂಡು ಅಪಮಾನಕಾರಿ ವಿಚಾರಗಳನ್ನು ಇಂಟರ್ನೆಟ್ಟಿನಲ್ಲಿ ಪೋಸ್ಟ್ ಮಾಡಲಾಗಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಹೇಶ್-ಸರೋಜಾ ದಂಪತಿಗೆ ಓರ್ವ ಪುತ್ರನಿದ್ದಾನೆ. ಆದರೂ ಆತ ಹಲವು ಯುವತಿಯರ ಜತೆ ಸಂಬಂಧ ಇಟ್ಟುಕೊಂಡಿದ್ದ. ಪತ್ನಿಗೆ ವಿಚ್ಛೇದನ ನೀಡಿ ಮದುವೆಯಾಗುವುದಾಗಿ ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಪತ್ನಿ ಸರೋಜಾಳನ್ನು ಮನೆಯಲ್ಲಿನ ಕತ್ತಲ ಕೋಣೆಗೆ ತಳ್ಳಿ ಮಹೇಶ್ ಹಿಂಸೆ ನೀಡಿದ್ದ. ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸರೋಜಾ ಮಾನಸಿಕ ಅಸ್ವಸ್ಥೆ ಎಂದೆಲ್ಲ ತನ್ನ ಗೆಳೆಯರಲ್ಲಿ ಮಹೇಶ್ ಅಪಪ್ರಚಾರ ಮಾಡಿದ್ದ ಎಂದೂ ಆರೋಪಿಸಲಾಗಿದೆ.
ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿದ್ದ ಸರೋಜಾ ನಂತರ ಖಾಸಗಿ ಕಂಪನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ನಡುವೆ ಮನಸ್ತಾಪದಿಂದಾಗಿ ತವರಿಗೆ ಮರಳಿದ್ದರೂ, ಕೆಲ ಸಮಯದ ನಂತರ ಮಹೇಶ್ ಜತೆ ಮತ್ತೆ ಬಾಳ್ವೆ ಆರಂಭಿಸಿದ್ದರು.
ಇತ್ತೀಚೆಗಷ್ಟೇ ತನ್ನ ಇ-ಮೇಲ್ ಮತ್ತು ಸಾಮಾಜಿಕ ಸಂಪರ್ಕ ತಾಣಗಳನ್ನು ಗಮನಿಸಿದಾಗ, ತನ್ನ ಖಾತೆಯನ್ನು ಬೇರೆ ಯಾರೋ ಹ್ಯಾಕ್ ಮಾಡಲಾಗಿರುವುದು ಗಮನಕ್ಕೆ ಬಂದಿತ್ತು. ಅಲ್ಲದೆ ತನ್ನನ್ನು ಕಾಲ್ ಗರ್ಲ್ ಎಂಬುದಾಗಿ ಬಿಂಬಿಸಿರುವುದು ಆಘಾತ ತಂದಿತ್ತು.
ತಕ್ಷಣವೇ ಆಕೆ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ತನಿಖೆಯ ನಂತರ ಈ ಕೃತ್ಯವನ್ನು ನಡೆಸಿರುವುದು ಸ್ವತಃ ಗಂಡನೇ ಎಂಬುದು ಬಹಿರಂಗವಾಗಿದೆ.