ಮೊನ್ನೆ ಮೊನ್ನೆಯಷ್ಟೇ ರಾಹುಲ್ ಗಾಂಧಿ ಸೇರಿದಂತೆ ನೆಹರೂ ಕುಟುಂಬವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಗಮನ ಸೆಳೆದಿದ್ದ ಸಂಯುಕ್ತ ಜನತಾದಳ ವರಿಷ್ಠ ಶರದ್ ಯಾದವ್ ಇದೀಗ ತನ್ನದೇ ಪಕ್ಷದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಹರಿಹಾಯ್ದಿದ್ದಾರೆ. ನಿತೀಶ್ ನಿಷ್ಪ್ರಯೋಜಕ ಎಂದು ಜರೆದಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಇಬ್ಬರೂ ನಿಷ್ಪ್ರಯೋಜಕರು. ಕಾಂಗ್ರೆಸ್ ಎನ್ನುವುದು ಯೂಸ್‌ಲೆಸ್ ಪಾರ್ಟಿ ಎಂದು ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ನಿರತರಾಗಿರುವ ಶರದ್, ಸರಣ್ ಜಿಲ್ಲೆಯ ಮರೌಹ್ರಾ ಕ್ಷೇತ್ರದಲ್ಲಿನ ಗೌರಾ ವಿಶ್ರಾಂಪುರ್ ಹೈಸ್ಕೂಲ್ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಂದಿಯೆದುರು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯನ್ನು ಗಂಗಾ ನದಿಗೆ ಎಸೆಯಿರಿ ಎಂದು ಹೇಳಿದ 36 ಗಂಟೆಗಳ ನಂತರ ಶರದ್ ಈ ರೀತಿಯಾಗಿ ಮತ್ತೊಂದು ವಾಗ್ದಾಳಿ ನಡೆಸಿದ್ದಾರೆ.
ನಿತೀಶ್ ಯೂಸ್‌ಲೆಸ್ ಎಂದಿರುವುದು ಮಾತ್ರವಲ್ಲ, ಅವರ ಬದ್ಧವೈರಿ ಲಾಲೂ ಜತೆ ಶರದ್ ಹೋಲಿಕೆ ಮಾಡಿದ್ದಾರೆ. ಜತೆಗೆ ಸ್ವತಃ ನಿತೀಶ್‌ಗೆ ತಾನೊಬ್ಬ ಮುಖ್ಯಮಂತ್ರಿ ಮತ್ತು ಜೆಡಿಯು ಉನ್ನತ ನಾಯಕ ಎಂಬುದು ಅರಿವಿದ್ದಂತಿಲ್ಲ ಎಂದಿದ್ದಾರೆ.
ನಾನು ಹಾಗೆ ಹೇಳಿಯೇ ಇಲ್ಲ- ಶರದ್ ತನ್ನದೇ ಪಕ್ಷದ ಮುಖ್ಯಮಂತ್ರಿಯ ವಿರುದ್ಧ ಚುನಾವಣಾ ಸಂದರ್ಭದಲ್ಲಿ ಟೀಕಿಸಿರುವುದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶರದ್ ಯಾದವ್ ಪ್ಲೇಟ್ ಬದಲಾಯಿಸಿದ್ದಾರೆ. ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರನ್ನು ನಾನು ನಿಷ್ಪ್ರಯೋಜಕ ಎಂದು ಕರೆದೇ ಇಲ್ಲ. ನನ್ನ ಸಂಪೂರ್ಣ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಶರದ್ ತಿಳಿಸಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿರುವ ಜೆಡಿಯು ರಾಷ್ಟ್ರೀಯ ವಕ್ತಾರ ಶಿವಾನಂದ್ ತಿವಾರಿ, ಶರದ್ ಯಾದವ್ ಅವರು ನಿತೀಶ್ ವಿರುದ್ಧ ಈ ರೀತಿಯ ಹೇಳಿಕೆ ನೀಡಿರುವುದು ಸಾಧ್ಯವಿಲ್ಲ. ತನ್ನದೇ ಪಕ್ಷದ ಮುಖ್ಯಮಂತ್ರಿಯ ವಿರುದ್ಧ ಈ ರೀತಿಯ ಭಾಷೆಯನ್ನು ಅವರು ಬಳಸಿರಲಾರರು. ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸ್ವತಃ ನಿತೀಶ್ ಹೇಳಿಕೆ ನೀಡಬಹುದು ಎಂದಿದ್ದಾರೆ.