ಪಾಕಿಸ್ತಾನಿ ಮೂಲದ ಅಮೆರಿಕಾ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯ್ಯದ್ ಗಿಲಾನಿಯ ಕುರಿತು ಮುಂಬೈ ದಾಳಿಯ ಮೊದಲು ಬಿಡಿ, ನಂತರವೂ ಸರಿಯಾಗಿ ಅಮೆರಿಕಾ ಮಾಹಿತಿ ವಿನಿಮಯ ಮಾಡಿಕೊಂಡಿಲ್ಲ ಎಂದು ಭಾರತ ಆರೋಪಿಸಿದರೆ, ಅತ್ತ ಅಮೆರಿಕಾವು ಉಗ್ರನ ಕುರಿತು ನಿರಂತರವಾಗಿ ಮಾಹಿತಿ ನೀಡಿರುವುದಾಗಿ ಹೇಳಿಕೊಂಡಿದೆ.
ಅಮೆರಿಕಾವು ಹೆಡ್ಲಿಯ ಹೆಸರನ್ನೂ ನಮ್ಮೊಂದಿಗೆ ಹಂಚಿಕೊಂಡಿರಲಿಲ್ಲ. ಮುಂಬೈ ದಾಳಿಯ ಮೊದಲು ಬಿಡಿ, ನಂತರವೂ ಈ ಕ್ರಮಕ್ಕೆ ಅಮೆರಿಕಾ ಮುಂದಾಗಿರಲಿಲ್ಲ. ಅಮೆರಿಕಾ ಮಾಹಿತಿ ನೀಡಿರುತ್ತಿದ್ದರೆ ಆತನನ್ನು 2009ರ ಮಾರ್ಚ್ ತಿಂಗಳಲ್ಲಿ ಭಾರತದಲ್ಲೇ ಆತನನ್ನು ಬಂಧಿಸಬಹುದಿತ್ತು ಎಂದು ಸಂದರ್ಶನವೊಂದರಲ್ಲಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿದ್ದರು.
ಹೆಡ್ಲಿಯ ಪತ್ನಿಯರು ಆತನ ಕುರಿತು ಉಗ್ರ ನಿಗ್ರಹ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಮೆರಿಕಾ ಕ್ರಮಕ್ಕೆ ಮುಂದಾಗಿರದ ಕುರಿತ ಪ್ರಶ್ನೆಗೆ ಪಿಳ್ಳೈ, 'ಆತನ ಹೆಸರನ್ನು ನಮ್ಮ ಜತೆ ಹಂಚಿಕೊಳ್ಳದೇ ಇರುವುದು ನಮಗೆ ಅಸಮಾಧಾನ ತಂದಿದೆ. ಮುಂಬೈ ದಾಳಿಯ ಮೊದಲು ಸಾಧ್ಯವಾಗದೇ ಇದ್ದರೆ, ಕನಿಷ್ಠ ನಂತರವಾದರೂ ಹಂಚಿಕೊಳ್ಳಬಹುದಿತ್ತು. ಹಾಗೆ ಮಾಡುತ್ತಿದ್ದರೆ ಆತನನ್ನು ನಂತರ ಭಾರತಕ್ಕೆ ಬಂದಾಗ ಬಂಧಿಸಬಹುದಿತ್ತು' ಎಂದು ಹೇಳಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕಾ, ತಾನು ಹೆಡ್ಲಿ ಕುರಿತು ಸಾಕಷ್ಟು ಮಾಹಿತಿಗಳನ್ನು ನಿರಂತರವಾಗಿ ಭಾರತದ ಜತೆ ಹಂಚಿಕೊಂಡಿರುವುದಾಗಿ ಹೇಳಿದೆ.
ಪಿಳ್ಳೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವುದು ಅಮೆರಿಕಾದ ಭಾರತದಲ್ಲಿನ ರಾಯಭಾರಿ ತಿಮೋತಿ ರೋಮರ್. ಮುಂಬೈ ದಾಳಿಗೂ ಮೊದಲೇ ಅಮೆರಿಕಾವು ಭಾರತದ ಜತೆ ನಿರಂತರವಾಗಿ ಮಾಹಿತಿಗಳನ್ನು ಹಂಚಿಕೊಂಡಿತ್ತು. ಅದು ಇಂದಿನವರೆಗೂ ಪ್ರಾಣಗಳನ್ನು ಉಳಿಸುವ ನಿಟ್ಟಿನಲ್ಲಿ ಮುಂದುವರಿದಿದೆ ಎಂದಿದ್ದಾರೆ.
ತಾವು ಹೆಡ್ಲಿಯ ಕುರಿತು ವರದಿಯನ್ನು ಪ್ರಕಟಿಸಿದಾಗ ಅಮೆರಿಕಾವು ಭಾರತದ ಜತೆ ಆತನ ಕುರಿತ ಮಾಹಿತಿಗಳನ್ನು ಹಂಚಿಕೊಂಡಿತ್ತು ಎಂಬ ಅಮೆರಿಕಾದ ಮಾಧ್ಯಮಗಳು ಹೇಳಿರುವುದು ಸರಿ ಎಂದೂ ತಿಮೋತಿ ತಿಳಿಸಿದ್ದಾರೆ.
ದಾಳಿ ನಡೆಸಿದ ಆರೋಪಿಗಳು ಪಾಕಿಸ್ತಾನ ಮೂಲದವರೆಂಬ ಕಾರಣಕ್ಕೆ ಆ ದೇಶದ ಮೇಲೆ ಒತ್ತಡ ಹೇರಲು ಇನ್ನಿಲ್ಲದ ಕಸರತ್ತು ನಡೆಸುವ ಅಮೆರಿಕಾ, ತನ್ನದೇ ದೇಶದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸುವುದಾಗಲೀ ಅಥವಾ ಆತನ ಕುರಿತು ಹೆಚ್ಚಿನ ಮಾಹಿತಿಗಳನ್ನು ನೀಡುವುದನ್ನಾಗಲಿ ಮಾಡಿಲ್ಲ. ಆ ಮೂಲಕ ಅಮೆರಿಕಾವು ತನ್ನ ಇಬ್ಬಗೆ ನೀತಿಯನ್ನು ಮುಂದುವರಿಸಿರುವುದು ಸ್ಪಷ್ಟ.
ಹೆಡ್ಲಿ ಅಮೆರಿಕಾ ಬೇಹುಗಾರಿಕಾ ಇಲಾಖೆಯ ಡಬ್ಬಲ್ ಏಜೆಂಟ್ ಆಗಿದ್ದ ಎನ್ನುವುದು ಕೂಡ ಇಲ್ಲಿ ಮುಖ್ಯ ಅಂಶ. ಹೆಡ್ಲಿ ಭಾರತದ ಮೇಲೆ ದಾಳಿಗೆ ಯೋಜನೆ ಸಿದ್ಧಪಡಿಸುತ್ತಿದ್ದಾನೆ ಎಂದು ಆತನ ಪತ್ನಿಯರು ನಾಲ್ಕೈದು ವರ್ಷಗಳ ಹಿಂದೆಯೇ ಹೇಳಿದ್ದನ್ನು ಇದುವರೆಗೂ ಅಮೆರಿಕಾ ಹೇಳಿರಲಿಲ್ಲ. ಅದನ್ನು ಬಹಿರಂಗಪಡಿಸಿದ್ದ ಮಾಧ್ಯಮಗಳು. ಹೆಡ್ಲಿ ಪತ್ನಿಯರೇ ಮುಂದೆ ಬಂದು ಮಾಧ್ಯಮಗಳ ಮುಂದೆ ಈ ವಿಚಾರಗಳನ್ನು ಬಹಿರಂಗಪಡಿಸಿದ್ದರು.
ಆದರೂ ಭಾರತವು ಅಮೆರಿಕಾದ ಮುಂದೆ ಮಂಡಿಯೂರುತ್ತಿರುವುದು ರೇಜಿಗೆ ಹುಟ್ಟಿಸುತ್ತಿದೆ.