ಅಜ್ಮೀರ್ ಸ್ಫೋಟದಲ್ಲಿ ಇನ್ನಷ್ಟು ಆರೆಸ್ಸೆಸ್ ನಾಯಕರು: ಸಚಿವ
ಜೈಪುರ, ಗುರುವಾರ, 28 ಅಕ್ಟೋಬರ್ 2010( 12:45 IST )
ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇನ್ನಷ್ಟು ನಾಯಕರ ಹೆಸರುಗಳು ಹೊರ ಬರಲಿವೆ ಎಂದು ರಾಜಸ್ತಾನ ಗೃಹಸಚಿವ ಶಾಂತಿ ಧರಿವಾಲ್ ಹೇಳಿದ್ದಾರೆ. ಆರೆಸ್ಸೆಸ್ ಕಾರ್ಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಇವೆಲ್ಲ ಷಡ್ಯಂತ್ರ ಎನ್ನುವುದನ್ನು ಸಂಘಪರಿವಾರ ಮತ್ತು ಬಿಜೆಪಿ ಮುಂದುವರಿಸಿದೆ.
2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಆರೋಪಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ರಾಜಸ್ತಾನ ಉಗ್ರ ನಿಗ್ರಹ ದಳವು ಶೀಘ್ರದಲ್ಲೇ ವಿಚಾರಣೆಗೊಳಪಡಿಸಲಿದೆ ಎಂದು ಸಂಪುಟ ಸಭೆಯ ನಂತರ ಕಾಂಗ್ರೆಸ್ ನಾಯಕರೂ ಆಗಿರುವ ಧರಿವಾಲ್ ತಿಳಿಸಿದರು.
ಈ ಪ್ರಕರಣದಲ್ಲಿ ಇನ್ನಷ್ಟು ಸಂಘ ಪರಿವಾರದ ಹೆಸರುಗಳು ಶೀಘ್ರದಲ್ಲೇ ಹೊರಗೆ ಬರಲಿವೆ. ಇಂದ್ರೇಶ್ ಕುಮಾರ್ ಅವರನ್ನೂ ವಿಚಾರಣೆ ನಡೆಸಲಾಗುತ್ತದೆ. ಸಂಘ ಪರಿವಾರವು ಸ್ಫೋಟದಲ್ಲಿ ಪಾಲ್ಗೊಂಡಿರುವ ಬಗ್ಗೆ ಎಟಿಎಸ್‌ನಲ್ಲಿ ಬಲವಾದ ಸಾಕ್ಷ್ಯಗಳಿವೆ ಎಂದರು.
ಇಂದ್ರೇಶ್ ವಿಚಾರಣೆ ಎಂದು ನಡೆಸಲಾಗುತ್ತದೆ ಎಂಬ ಪ್ರಶ್ನೆಗೆ, ಇದನ್ನು ನಿರ್ಧರಿಸಬೇಕಾಗಿರುವುದು ಪ್ರಕರಣದ ತನಿಖೆ ನಡೆಸುತ್ತಿರುವ ಎಟಿಎಸ್. ಅವರು 2005ರ ಅಕ್ಟೋಬರ್ ತಿಂಗಳಲ್ಲಿ ಇಲ್ಲಿನ ಗುಜರಾತಿ ಗೆಸ್ಟ್ ಹೌಸಿನಲ್ಲಿ ರಹಸ್ಯ ಸಭೆ ನಡೆಸಿರುವುದರ ಕುರಿತು ನಮ್ಮಲ್ಲಿ ಪುರಾವೆಗಳಿವೆ ಎಂದರು.
ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡಿರುವ ಇಥರ ಆರೆಸ್ಸೆಸ್ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದ್ದಾರೆ.
ಆರೆಸ್ಸೆಸ್ ಚಟುವಟಿಕೆ ಗಮನಿಸಬೇಕು: ಕಾಂಗ್ರೆಸ್ ಅಜ್ಮೀರ್ ಸ್ಫೋಟದಲ್ಲಿ ಪಾಲ್ಗೊಂಡಿರುವ ಆರೋಪಗಳು ಬಂದಿರುವುದರಿಂದ ಆರೆಸ್ಸೆಸ್ ಕಾರ್ಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಬೇಕು, ಅದರ ಮೇಲೆ ಹದ್ದಿನ ಕಣ್ಣಿಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಆರೆಸ್ಸೆಸ್ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ಬಂದಿದ್ದು, ಅದನ್ನು ಹತ್ತಿರದಿಂದ ಗಮನಿಸಬೇಕಾಗಿದೆ. ಈ ಸಂಘಟನೆಯನ್ನು ನಿಷೇಧಿಸುವುದು ಅಥವಾ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ರಾಜಸ್ತಾನ ಸರಕಾರಕ್ಕೆ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದರು.