ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕರ್ನಾಟಕ ನಿರಾಕರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ. ಕರುಣಾನಿಧಿ, ತನ್ನ ಪಾಲಿನ ನೀರನ್ನು ಪಡೆಯುವುದಕ್ಕಾಗಿ ಕಾನೂನಿನ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕರುಣಾನಿಧಿ, ನಾವು ನಮ್ಮ ಪಾಲಿನ ನೀರಿಗಾಗಿ ಹೋರಾಟ ಮುಂದುವರಿಸುತ್ತೇವೆ; ಈ ಕುರಿತು ನಾವು ಕಾನೂನು ಹೋರಾಟ ನಡೆಸುತ್ತೇವೆ. ಆದರೂ ನಾನು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅದರಿಂದ ಎರಡು ರಾಜ್ಯಗಳ ನಡುವೆ ಅನಗತ್ಯ ಭಿನ್ನಾಭಿಪ್ರಾಯಗಳಿಗೆ ಕಾರಣವಾಗುತ್ತದೆ ಎಂದರು.
ಕೃಷ್ಣರಾಜಸಾಗರ ಅಣೆಕಟ್ಟಿನ ಗರಿಷ್ಠ ಧಾರಣಾ ಸಾಮರ್ಥ್ಯ 124.7 ಅಡಿಗಳಷ್ಟು ನೀರು ತುಂಬಿದ ನಂತರ ತಮಿಳುನಾಡಿಗೆ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ಹೇಳಿದೆ ಎಂಬ ವರದಿಗಳು ತನಗೆ ಅಚ್ಚರಿ ತಂದಿಲ್ಲ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿರುವ ಉಭಯರ ಸಂಬಂಧಕ್ಕೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ತಾನು ಮುಂದಾಗುವುದಿಲ್ಲ ಎಂದು ಕರುಣಾನಿಧಿ ತಿಳಿಸಿದರು.
ವಿವಾದದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, ಕಾವೇರಿ ಜಲ ವಿವಾದವನ್ನು ಪ್ರಧಾನ ಮಂತ್ರಿಯವರ ಬಳಿ ಕೊಂಡೊಯ್ಯುವ ಅಗತ್ಯವಿಲ್ಲ. ಅವರಿಗೆ ಈಗಾಗಲೇ ಇದರ ಬಗ್ಗೆ ಮಾಹಿತಿಯಿದೆ. ಅಲ್ಲದೆ ವಿವಾದವು ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಬೇಕಿರುವುದರಿಂದ ತರಾತುರಿ ಬೇಕಾಗಿಲ್ಲ ಎಂದರು.
ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ವಪಕ್ಷದ ಸಭೆ ಕರೆದು ತಮಿಳುನಾಡಿಗೆ ನೀರು ಬಿಡುವ ಕುರಿತು ಚರ್ಚೆ ನಡೆಸಿದ್ದರು. ಜಲಾಶಯ ಭರ್ತಿಯಾಗದ ಹೊರತು ನೀರು ಬಿಡಲಾಗದು. ಅಷ್ಟಕ್ಕೂ ಈಗ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿಯುತ್ತಿದೆ ಎಂದು ಸಭೆಯ ನಂತರ ಪ್ರತಿಕ್ರಿಯೆ ನೀಡಿದ್ದರು.
ಅಂತಾರಾಜ್ಯ ಜಲವಿವಾದ ಪರಿಹಾರ ಮಂಡಳಿಯ ಮಧ್ಯಂತರ ಆದೇಶದ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ಪ್ರತೀ ವರ್ಷ 205 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ ಈ ಬಾರಿ ಜಲಾಶಯಗಳು ತುಂಬದ ಕಾರಣ ಕರ್ನಾಟಕ ಒಪ್ಪಂದದಂತೆ ನೀರು ಬಿಟ್ಟಿಲ್ಲ.