ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರನ್ನು ರಾಜಧಾನಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದು, ಇದರ ಬೆನ್ನಿಗೆ ಪ್ರತಿಕ್ರಿಯಿಸಿರುವ ಚೌಹಾನ್, ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಮಾತುಕತೆಯ ನಂತರ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಚೌಹಾನ್, 'ನಾನು ರಾಜೀನಾಮೆ ನೀಡಲು ಸಿದ್ಧಿನಿದ್ದೇನೆ. ಈ ಕುರಿತು ಅಂತಿಮ ತೀರ್ಮಾನವನ್ನು ನೀವೇ ತೆಗದೆಕೊಳ್ಳಿ' ಎಂದು ಸೋನಿಯಾಗೆ ಹೇಳಿರುವುದಾಗಿ ತಿಳಿಸಿದರು.
ವಸತಿ ಹಗರಣದಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಪಾಲ್ಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಇಂದು ಬೆಳಿಗ್ಗೆ ಮಹಾರಾಷ್ಟ್ರಕ್ಕೆ ಸೇರಿದ ಕೆಲವು ನಾಯಕರ ಜತೆ ಮಾತುಕತೆ ನಡೆಸಿದ್ದರು.
ಪರಿಸರ ಸಚಿವ ಜೈರಾಮ್ ರಮೇಶ್, ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಮತ್ತು ಕೇಂದ್ರ ಸಚಿವ ಪೃಥ್ವಿರಾಜ್ ಚೌಹಾನ್ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಶೋಕ್ ಚೌಹಾನ್ ಸೋನಿಯಾರನ್ನು ಭೇಟಿಯಾಗಿದ್ದಾರೆ.
ಕಾರ್ಗಿಲ್ ಯೋಧರು ಮತ್ತು ಹುತಾತ್ಮರ ಪತ್ನಿಯರಿಗೆ ಮೀಸಲಾಗಿದ್ದ ಆದರ್ಶ ಹೌಸಿಂಗ್ ಸೊಸೈಟಿ ಯೋಜನೆಯಲ್ಲಿ ಹಲವು ರಾಜಕಾರಣಿಗಳು ಫ್ಲ್ಯಾಟ್ ಪಡೆದಿರುವುದು ಬಹಿರಂಗವಾದ ನಂತರ ಪ್ರಕರಣ ಭಾರೀ ತಿರುವು ಪಡೆದುಕೊಳ್ಳುತ್ತಿದೆ.
ಇದರಲ್ಲಿ ಚೌಹಾನ್ ಅವರ ಅತ್ತೆ ಮತ್ತು ಇತರ ಇಬ್ಬರು ಸಂಬಂಧಿಕರು ಕೂಡ ಫ್ಲ್ಯಾಟ್ ಪಡೆದಿರುವುದು ಬಹಿರಂಗವಾಗಿತ್ತು. ಒಟ್ಟಾರೆ 103 ಮಂದಿ ವಿವಾದಿತ ವ್ಯಕ್ತಿಗಳಿಗೆ ಮಿಲಿಟರಿಗೆ ಸೇರಿದ ಕಟ್ಟಡದಲ್ಲಿ ಮನೆಗಳನ್ನು ಹಂಚಲಾಗಿತ್ತು. ಇದರಲ್ಲಿ ರಕ್ಷಣಾ ಇಲಾಖೆಯ ಮಾಜಿ ಮುಖ್ಯಸ್ಥರು, ಕಾಂಗ್ರೆಸ್ ಮತ್ತಿತರ ಪಕ್ಷಗಳ ನಾಯಕರು, ಅಧಿಕಾರಿಗಳು ಸೇರಿದ್ದಾರೆ ಎಂದು ವರದಿಗಳು ಹೇಳಿದ್ದವು.
ತನ್ನ ಅತ್ತೆ ಮತ್ತು ಇಬ್ಬರು ಸಂಬಂಧಿಕರಿಗೆ ನೀಡಿರುವ ಫ್ಲ್ಯಾಟ್‌ಗಳನ್ನು ಹಿಂತಿರುಗಿಸಲಾಗಿದೆ ಎಂದು ಚೌಹಾನ್ ಹೇಳಿಕೆ ನೀಡಿರುವ ಹೊರತಾಗಿಯೂ ಅಶೋಕ್ ಚೌಹಾನ್ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೂಲಗಳ ಪ್ರಕಾರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ.
ಆದರ್ಶ್ ವಸತಿ ಯೋಜನೆಯಲ್ಲಿ ಚೌಹಾನ್ ಪ್ರಭಾವ ಬೀರಿರುವುದು ಹಲವು ದಾಖಲೆ ಪತ್ರಗಳಲ್ಲಿ ಕಂಡು ಬಂದಿದೆ. ಸ್ವತಃ ಕಂದಾಯ ಸಚಿವರಾಗಿದ್ದಾಗಲೇ ಅವರು ತನ್ನ ಸಂಬಂಧಿಕರು ಮತ್ತು ಆಪ್ತರಿಗೆ ಫ್ಲ್ಯಾಟ್ ಒದಗಿಸುವಲ್ಲಿ ವಶೀಲಿಬಾಜಿ ಆರಂಭಿಸಿದ್ದರು ಎಂದು ಹೇಳಲಾಗಿದೆ.