ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಬಾಮ: ಪಾಕಿಗೆ ಎಚ್ಚರಿಕೆ, ಭಾರತಕ್ಕೆ ಪೂರ್ಣ ಬೆಂಬಲ (Obama | Pakistan | America | Sonia | Manmohan singh)
Bookmark and Share Feedback Print
 
ND
'ಉಗ್ರರ ದಾಳಿಯಲ್ಲಿ ನಾವು ಸಮಾನ ದುಃಖಿಗಳು. ಮುಂಬೈನಲ್ಲಿ ಮುಗ್ದರ ಮಾರಣ ಹೋಮವಾಗಿದೆ. ಭಾರತದ ಸಂಸತ್ ಮೇಲೂ ಉಗ್ರರ ದಾಳಿಯಾಗಿದೆ. ಆ ನಿಟ್ಟಿನಲ್ಲಿ ಉಗ್ರರಿಗೆ ಪಾಕ್ ಆಶ್ರಯ ತಾಣವಾಗಬಾರದು. ಅಷ್ಟೇ ಅಲ್ಲ ಮುಂಬೈ ದಾಳಿಕೋರರಿಗೆ ಶಿಕ್ಷೆ ಆಗಲೇಬೇಕು' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೋಮವಾರ ಸಂಜೆ ಸಂಸತ್ ಜಂಟಿ ಸದನ ಉದ್ದೇಶಿಸಿ ಮಾತನಾಡುತ್ತ ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತವನ್ನು ಬೆಂಬಲಿಸುವುದಾಗಿಯೂ ಒಬಾಮ ಘೋಷಿಸಿದರು.

ಮುಂಬೈ ದಾಳಿಯಂತಹ ದುಷ್ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಎಚ್ಚರವಾಗಿರಬೇಕು. ಪಾಕ್ ನೆಲದ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಇದರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಭಯೋತ್ಪಾದನೆ ಜಾಗತಿಕವಾಗಿ ಬೆಳೆಯುತ್ತಿರುವ ಒಂದು ಪಿಡುಗಾಗಿದೆ. ಆದರೂ ನಾವು ಉಗ್ರರ ದಾಳಿಯನ್ನು ಮೆಟ್ಟಿ ನಿಂತಿದ್ದೇವೆ. ಅಲ್ಲದೇ ಉಗ್ರರ ದಮನಕ್ಕೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಕಾರ್ಯನಿರ್ವಹಿಸುವ ಅಗತ್ಯವೂ ಇದೆ ಎಂದು ಒತ್ತಿ ಹೇಳಿದರು.

ಭಾರತ ವಿಶ್ವದ ಉತ್ತಮ ಪ್ರಜಾಪ್ರಭುತ್ವ ರಾಷ್ಟ್
ಭಾರತದ ಸಂಸತ್‌ನಲ್ಲಿ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸುವುದಾಗಿ ಹೇಳಿ ಭಾಷಣ ಆರಂಭಿಸಿದ ಒಬಾಮ, ಭಾರತ ವಿಶ್ವದ ಅತ್ಯಂತ ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತ ವಿಶ್ವದ ಶ್ರೀಮಂತ ನಾಗರಿಕತೆಯಲ್ಲಿ ಒಂದಾಗಿದೆ. ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆ ನಿಟ್ಟಿನಲ್ಲಿ ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದ ರಾಷ್ಟ್ರವಾಗಿದೆ ಎಂದು ಶ್ಲಾಘಿಸಿದರು.

ಭಾರತ ಉದಯೋನ್ಮುಖ ರಾಷ್ಟ್ರವಲ್ಲ, ಈಗಾಗಲೇ ಉದಯಿಸಿದ ರಾಷ್ಟ್ರವಾಗಿದೆ. ಭಾರತದಲ್ಲಿ ವಿಶ್ವದ ಅತೀದೊಡ್ಡ ಮಧ್ಯಮ ವರ್ಗದ ಗುಂಪಿದೆ. ಭಾರತ ದೇಶದ ಸಂಸ್ಕೃತಿಯನ್ನು ನಾನು ಗೌರವಿಸುತ್ತೇನೆ. ಭಾರತ ವೈವಿಧ್ಯತೆಯಲ್ಲಿ ಏಕತೆ ಮೂಡಿರುವ ರಾಷ್ಟ್ರ ಎಂಬುದೇ ದೊಡ್ಡ ಹೆಗ್ಗಳಿಕೆಯ ವಿಷಯವಾಗಿದೆ.

ಭಾರತದ ಜನರೇ ದೇಶದ ಅತಿದೊಡ್ಡ ಸಂಪನ್ಮೂಲ. ಪ್ರಜಾಪ್ರಭುತ್ವದಿಂದಾಗಿಯೇ ಭಾರತ ಯಶಸ್ವಿ ರಾಷ್ಟ್ರವಾಗಿದೆ. ಅಷ್ಟೇ ಅಲ್ಲ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದು ಭಾರತದಲ್ಲೇ ಆಗಿದೆ ಎಂದು ಹೊಗಳಿದರು. ಒಬಾಮ ಅವರು ಸುಮಾರು 20 ನಿಮಿಷಗಳ ಕಾಲದ ತಮ್ಮ ಭಾಷಣದುದ್ದಕ್ಕೂ ಭಾರತವನ್ನು ಹೊಗಳಿ ಅಟ್ಟಕ್ಕೇರಿಸಿದರು. ಒಬಾಮ ಪ್ರತಿ ಮಾತಿಗೂ ಸಂಸದರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಬೆಂಗಳೂರು ಪ್ರಸ್ತಾಪ
ಭಾಷಣದ ನಡುವೆ ಬೆಂಗಳೂರು ಹೆಸರೂ ಪ್ರಸ್ತಾಪಿಸಿದರು. ಪಂಜಾಬಿನ ಹಳ್ಳಿಯಲ್ಲೋ, ಚಾಂದ್‌ನಿಚೌಕದ ಗಲ್ಲಿಗಳಲ್ಲೋ, ಕೋಲ್ಕತಾದ ಹಳೆಯ ಭಾಗದಲ್ಲೋ, ಅಥವಾ ಬೆಂಗಳೂರಿನ ಬಾನೆತ್ತರದ ಕಟ್ಟಡದಲ್ಲೋ... ನೀವು ಎಲ್ಲೇ ಇರಿ, ಎಲ್ಲರಿಗೂ ಭದ್ರವಾಗಿ ಮತ್ತು ಗೌರವದಿಂದ ಜೀವಿಸುವ, ಶಿಕ್ಷಣ ಪಡೆಯುವ, ಉದ್ಯೋಗ ಪಡೆಯುವ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಹಕ್ಕಿದೆ ಎಂದು ಅವರು ಪ್ರಸ್ತಾಪಿಸಿದರು.

ಜಂಟಿ ಅಧಿವೇಶನದಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಲೋಕಸಭಾ ಸ್ಪೀಕರ್ ಮೀರಾಕುಮಾರ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ. ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಎಲ್ಲಾ ಸಂಸದರು ಭಾಗವಹಿಸಿದ್ದರು.

ಭಾಷಣದ ಪ್ರಮುಖ ಅಂಶಗಳು:
* ರಾಷ್ಟ್ರಪಿತ ಮಹಾತ್ಮಗಾಂಧಿಗೆ ನಮಿಸುತ್ತೇನೆ.
* ಸ್ವಾಮಿ ವಿವೇಕಾನಂದರನ್ನು ನಾನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ.
* ಟೆಲಿಪ್ರಾಂಪ್ಟರ್ ಬಳಸಿ ಬರಾಕ್ ಒಬಾಮ ಭಾಷಣ.
* ಸಂಸತ್‌ನಲ್ಲಿ ಇದೇ ಮೊದಲ ಬಾರಿ ಟೆಲಿಪ್ರಾಂಪ್ಟರ್ ಬಳಕೆ.
* ನನಗೆ ಮತ್ತು ನನ್ನ ಪತ್ನಿಗೆ ಭಾರತದ ಭೇಟಿ ತುಂಬಾ ಮಹತ್ವವಾದದ್ದು.
* ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಭದ್ರತೆಯನ್ನು ಸದಾ ಬಯಸುತ್ತದೆ.
* ಅಧ್ಯಕ್ಷನಾಗಲು ಗಾಂಧೀಜಿ ತತ್ವಾದರ್ಶ ನೆರವಾಗಿದೆ.
* ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಸಂಪೂರ್ಣ ಬೆಂಬಲವಿದೆ.
* ಭಾರತ ವಿಶ್ವದ ಪ್ರಬಲ ಶಕ್ತಿಯಾಗಿ ಬೆಳೆಯಲು ಅಮೆರಿಕ ಬೆಂಬಲ ನೀಡುತ್ತದೆ.
* ಭಾರತದ ವಿಜ್ಞಾನ ತಂತ್ರಜ್ಞಾನ ಸಾಧನೆಗೆ ಶ್ಲಾಘನೆ.
* ಪ್ರಜಾತಂತ್ರ ವ್ಯವಸ್ಥೆಗೆ ಭಾರತ ಮಾದರಿ
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತಕ್ಕೆ ಸ್ವಾಗತ
* ಇರಾನ್, ಮಾಯನ್ಮಾರ್ ವಿರುದ್ಧ ಕ್ರಮಕ್ಕೆ ಅಮೆರಿಕವನ್ನು ಭಾರತ ಬೆಂಬಲಿಸಬೇಕು
* ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಆಶ್ರಯತಾಣವನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ
* ಮುಂಬೈ ದಾಳಿಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗಿದೆ
* ನಾನು, ಪತ್ನಿ ಭಾರತೀಯ ಜನತೆಯ ಸುಂದರ, ಸುಶೀಲ, ಉಪಚಾರದಿಂದ ಮನತುಂಬಿದೆ
* ಇರಾನ್ ಮೇಲೆ ನಿರ್ಬಂಧಕ್ಕೆ ಭಾರತದ ಸಹಕಾರ ಬೇಕು
* ಭಾರತದ ನೂರು ಕೋಟಿ ಜನತೆಗೆ ನನ್ನ ನಮನಗಳು
* ಆರ್‌ಟಿಐ, ಪಂಚಾಯತಿ ರಾಜ್ ಕಾಯ್ದೆಗೆ ಶ್ಲಾಘನೆ
* ಅಭಿವೃದ್ಧಿಯಲ್ಲಿ ಭಾರತ ವಿಶ್ವಕ್ಕೇ ಮಾದರಿ
* ಎಲ್ಲ ಕ್ಷೇತ್ರದಲ್ಲಿಯೂ ಭಾರತಕ್ಕೆ ಅಮೆರಿಕದಿಂದ ಸಹಕಾರ
* ಜೈಹಿಂದ್ ಎನ್ನುತ್ತಾ ಮಾತು ಮುಗಿಸಿದರು ಒಬಾಮ
ಸಂಬಂಧಿತ ಮಾಹಿತಿ ಹುಡುಕಿ