ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಗಬ್ಬೆದ್ದು ಹೋಗಿದೆ ಎಂದು ಪ್ರಚಾರ ಮಾಡುತ್ತಿರುವ ವಿಪಕ್ಷಗಳಿಗೆ ಮತ್ತೆ ಹೊಟ್ಟೆ ಉರಿಸುವ ಸುದ್ದಿ. ಇದರ ಹಿಂದಿನ ಕಾರಣ ರಾಜ್ಯಗಳ ರ‌್ಯಾಂಕಿಂಗ್‌ನಲ್ಲಿ ಕರ್ನಾಟಕ ತನ್ನ ಸ್ಥಾನವನ್ನು ಉಳಿಸಿಕೊಂಡು ಮುಂದುವರಿದಿರುವುದು.
'ಇಂಡಿಯಾ ಟುಡೇ' ವಾರಪತ್ರಿಕೆ ಪ್ರಕಟಿಸಿರುವ ರಾಜ್ಯಗಳ 2010ರ ರ‌್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಕಳೆದ ನಾಲ್ಕು ವರ್ಷಗಳಿಂದ ಸತತ ಇದೇ ಸ್ಥಾನವನ್ನು ಉಳಿಸಿಕೊಂಡಿರುವುದು ಮತ್ತು ಇದು ಕಾಂಗ್ರೆಸ್ಸೇತರ ಸರಕಾರಗಳ ಅವಧಿಯಲ್ಲಿ ನಡೆದಿರುವುದು ಐತಿಹಾಸಿಕ ಪಕ್ಷಕ್ಕೆ ಮುಜುಗರ ತರುವ ಸಂಗತಿಯೂ ಹೌದು.
ಕೃಷಿ, ಆರ್ಥಿಕತೆ, ಗ್ರಾಹಕರ ಮಾರುಕಟ್ಟೆ, ಆರೋಗ್ಯ, ಶಿಕ್ಷಣ, ಆಡಳಿತ, ಹೂಡಿಕೆ ಮತ್ತು ಮೂಲಭೂತ ಸೌಕರ್ಯ ಮುಂತಾದ ಮಾನದಂಡಗಳನ್ನು ಇಟ್ಟುಕೊಂಡು 2003ರಿಂದ ಪತ್ರಿಕೆ ನೀಡುತ್ತಾ ಬಂದಿರುವ ರ‌್ಯಾಂಕಿಂಗ್‌ನಲ್ಲಿ ಕರ್ನಾಟಕವು ಮೊದಲ ನಾಲ್ಕು ವರ್ಷ (2003-2006) ಎಂಟನೇ ಸ್ಥಾನದಲ್ಲಿತ್ತು. ಈ ಹೊತ್ತಿಗೆ ಕಾಂಗ್ರೆಸ್ಸಿನ ಆಡಳಿತವೂ ರಾಜ್ಯದಲ್ಲಿ ಬಹುತೇಕ ಕೊನೆಗೊಂಡಿತ್ತು. ಬಳಿಕ ಸತತ ನಾಲ್ಕನೇ ವರ್ಷ ರಾಜ್ಯವು ಏಳನೇ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.
ಇಲ್ಲಿ ನಂಬರ್ ವನ್ ರಾಜ್ಯವಾಗಿ ಈ ಬಾರಿ ಹಿಮಾಚಲ ಪ್ರದೇಶ ಮೂಡಿ ಬಂದಿದೆ. ಇದುವರೆಗೆ ನಂ.1 ಸ್ಥಾನದಲ್ಲಿದ್ದ ಪಂಜಾಬ್ ರಾಜ್ಯವನ್ನು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಆಡಳಿತವು ಹಿಂದಿಕ್ಕಿದೆ. ತಮಿಳುನಾಡು, ಕೇರಳ, ಗುಜರಾತ್ ಮತ್ತು ಹರ್ಯಾಣ ರಾಜ್ಯಗಳು ಕ್ರಮವಾಗಿ 3, 4, 5 ಮತ್ತು 6ನೇ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿವೆ.
ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಅಗ್ರ 5ರಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳೇ ಸ್ಥಾನ ಪಡೆದಿರುವುದು.
ಉಳಿದಂತೆ ಜಮ್ಮು-ಕಾಶ್ಮೀರ 8, ಮಹಾರಾಷ್ಟ್ರ 9, ಆಂಧ್ರಪ್ರದೇಶ 10, ಉತ್ತರಾಖಂಡ 11, ರಾಜಸ್ಥಾನ 12, ಪಶ್ಚಿಮ ಬಂಗಾಲ 13, ಮಧ್ಯಪ್ರದೇಶ 14, ಒರಿಸ್ಸಾ 15, ಉತ್ತರ ಪ್ರದೇಶ 16, ಛತ್ತೀಸ್‌ಗಢ 17, ಅಸ್ಸಾಂ 18, ಜಾರ್ಖಂಡ್ 19 ಹಾಗೂ ಕೊನೆಯ ಸ್ಥಾನದಲ್ಲಿ ಬಿಹಾರವಿದೆ.
ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಪಾಂಡಿಚೇರಿ ಮತ್ತು ಗೋವಾಗಳು ಎರಡು ಮತ್ತು ಮೂರನೇ ಸ್ಥಾನಗಳನ್ನು ಉಳಿಸಿಕೊಂಡಿವೆ. ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲೆಂಡ್, ತ್ರಿಪುರ ಮತ್ತು ಮೇಘಾಲಯಗಳು ನಂತರದ ಸ್ಥಾನಗಳಲ್ಲಿವೆ.
ಹೂಡಿಕೆಯಲ್ಲಿ ರಾಜ್ಯ ನಂ.8.. ರಾಜ್ಯಗಳಲ್ಲಿ ಹೂಡಿಕೆ ವಾತಾವರಣ ಹೇಗಿದೆ ಎನ್ನುವುದನ್ನು ಲೆಕ್ಕಾಚಾರ ಹಾರಿದಾಗ ಯಡಿಯೂರಪ್ಪ ಸರಕಾರವು ಹಿನ್ನಡೆ ಕಂಡಿದೆ. ಕಳೆದ ಬಾರಿ ಆರನೇ ಸ್ಥಾನದಲ್ಲಿದ್ದ ರಾಜ್ಯವು ಈ ಬಾರಿ 8ನೇ ಸ್ಥಾನಕ್ಕೆ ಕುಸಿದಿದೆ.
ಅರ್ಥ ವ್ಯವಸ್ಥೆಯಲ್ಲೂ ಕುಸಿತ... ರಾಜ್ಯಗಳ ಪ್ರಗತಿಗೆ ಅಲ್ಲಿನ ಹಣಕಾಸು ಪರಿಸ್ಥಿತಿಯೇ ಪ್ರಮುಖವಾಗಿರುತ್ತದೆ. ಇಲ್ಲಿ 8ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 9ನೇ ಸ್ಥಾನಕ್ಕೆ ಕುಸಿದಿದೆ.
ಕೃಷಿಯಲ್ಲೂ ಅದೇ ಗತಿ... 2008 ಮತ್ತು 2009ರಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿತ್ತು. ಆದರೆ 2010ರಲ್ಲಿ ಆರನೇ ಸ್ಥಾನಕ್ಕೆ ಹಿನ್ನಡೆ ಕಂಡಿದೆ.
ಗ್ರಾಹಕರ ಮಾರುಕಟ್ಟೆಯಲ್ಲಿ ನಂ.9... ಜನರ ಖರೀದಿ ಭರಾಟೆಯ ಲೆಕ್ಕಾಚಾರವಿದು. ಇಲ್ಲಿ ರಾಜ್ಯವು ಕಳೆದ ಮೂರು ವರ್ಷಗಳಿಂದ ಒಂಬತ್ತನೇ ಸ್ಥಾನದಲ್ಲಿ ಮುಂದುವರಿದಿದೆ.
ಶಿಕ್ಷಣದಲ್ಲಿ ಅಗ್ರಮಾನ್ಯ ಸಾಧನೆ... 6ರಿಂದ 14ರೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎನ್ನುವುದು ಕಾನೂನು. ಇಲ್ಲಿ ಕರ್ನಾಟಕ ಸಾಕಷ್ಟು ಪ್ರಗತಿ ಸಾಧಿಸಿದೆ. ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. 2009ರಲ್ಲಿ 8 ಮತ್ತು 2008, 2007ರಲ್ಲಿ 9ನೇ ಸ್ಥಾನದಲ್ಲಿತ್ತು ರಾಜ್ಯ.
ಮೂಲಭೂತ ಸೌಕರ್ಯ... ರಸ್ತೆ, ವಿದ್ಯುತ್, ಬ್ಯಾಂಕಿಂಗ್, ಸಂಪರ್ಕ, ಅಡುಗೆ ಅನಿಲ ಮುಂತಾದುವು ಈ ಪಟ್ಟಿಯಲ್ಲಿ ಬರುತ್ತದೆ. ಇಲ್ಲಿ ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 5ಕ್ಕೇರಿದೆ.
ಆಡಳಿತ ಕುಸಿದಿಲ್ಲ... ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದಿದ್ದ ಕರ್ನಾಟಕ ಈ ಬಾರಿಯೂ ಅದೇ ಸ್ಥಾನದಲ್ಲಿ ಮುಂದುವರಿದಿದೆ. 2008 ಮತ್ತು 2007ರಲ್ಲಿ ಮೂರನೇ ಸ್ಥಾನದಲ್ಲಿತ್ತು ಎನ್ನುವುದು ಇಲ್ಲಿ ಗಮನಾರ್ಹ.
ಆರೋಗ್ಯ ವೃದ್ಧಿ... ಆರೋಗ್ಯ ಸಚಿವ ಶ್ರೀರಾಮುಲು ಒಟ್ಟಾರೆ ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡಾಗ ಕರ್ನಾಟಕವು ಒಂದು ಸ್ಥಾನದ ಏರಿಕೆ ಕಂಡು ಐದಕ್ಕೆ ತಲುಪಿದೆ.