ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾದಿನಿ ಮದುವೆಗೆ ಅಡ್ಡಿ; ಮೂವರನ್ನು ಕೊಂದ ವಿವಾಹಿತ (Sonu Verma | Shiv Shankar Prasad | Reena | Dhanabad)
Bookmark and Share Feedback Print
 
ಪತ್ನಿಯ ತಂಗಿಯನ್ನು ಎರಡನೇ ಮದುವೆಯಾಗಲು ಹೊರಟಿದ್ದವನಿಗೆ ಮಾವ ಅಡ್ಡಿಪಡಿಸಿದನೆಂಬ ಕಾರಣಕ್ಕೆ ಮೂವರು ಅತ್ತಿಗೆ-ನಾದಿನಿಯರನ್ನು ಬೆಂಕಿ ಹಚ್ಚಿ ಕೊಂದ ಸ್ತ್ರೀಲೋಲನೊಬ್ಬನಿಂದಾಗಿ ಕುಟುಂಬವೇ ಅಸ್ತಿತ್ವ ಕಳೆದುಕೊಳ್ಳುವಂತಾಗಿರುವ ಕರುಣಾಜನಕ ಕಥೆಯಿದು. ತನ್ನ ಬದುಕನ್ನಷ್ಟೇ ಯೋಚಿಸಿ ತೀರಾ ಲೋಲುಪತೆಯ ಜೀವನದ ಕನಸಿನಲ್ಲಿ ಕೃತ್ಯ ನಡೆಸಿದ ನಂತರ ಪರಾರಿಯಾಗಿದ್ದಾನೆ.

ಇದು ನಡೆದಿರುವುದು ಜಾರ್ಖಂಡ್‌ನ ಧಾನಾಬಾದ್ ಜಿಲ್ಲೆಯಲ್ಲಿ. ಸೋನು ವರ್ಮಾ (30) ಎಂಬಾತನೇ ಆರೋಪಿ. ಈತನ ರಾಕ್ಷಸೀ ಕೃತ್ಯಕ್ಕೆ ಬಲಿಯಾದವರು ಅತ್ತಿಗೆ ಉಷಾ ದೇವಿ, ನಾದಿನಿಯರಾದ ರೀಮಾ (26) ಮತ್ತು ರೀನಾ (24).

ಆರೋಪಿ ಸೋನು ಚಂಡೀಗಢದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿಶಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದನಾದರೂ, ಆಕೆಯ ಕಿರಿಯ ತಂಗಿ ರೀನಾಳನ್ನು ಬಹುವಾಗಿ ಇಷ್ಟಪಟ್ಟಿದ್ದ. ಮದುವೆಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದ. ಆದರೆ ಇದಕ್ಕೆ ಮಾವ ಶಿವಶಂಕರ್ ಪ್ರಸಾದ್ ಒಪ್ಪಿಗೆ ನೀಡಿರಲಿಲ್ಲ.

ಈ ಕುರಿತು ಆತನ ಜತೆ ಜಗಳವೂ ನಡೆದಿತ್ತು. ಸೋನು ಹೆತ್ತವರಲ್ಲಿ ಪ್ರಸಾದ್ ಈ ಬಗ್ಗೆ ದೂರು ಕೂಡ ನೀಡಿದ್ದರು. ಸಾಕಷ್ಟು ಮಾತುಕತೆ ನಡೆಸಿದ ನಂತರ ಸೋನುವನ್ನು ಆತನ ಹೆತ್ತವರು ಚಂಡೀಗಢಕ್ಕೆ ಕರೆದುಕೊಂಡು ಹೋಗಿದ್ದರು.

ಈ ಘಟನೆ ಬಳಿಕ, ಸಾರ್ವಜನಿಕ ಆರೋಗ್ಯ ಅಭಿಯಂತರರ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಪ್ರಸಾದ್, ತನ್ನ ಕಿರಿಯ ಪುತ್ರಿ ರೀನಾಳಿಗೆ ಬೇರೊಂದು ಗಂಡನ್ನು ನೋಡಿ, ಫೆಬ್ರವರಿ 7ರಂದು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು.

ಆದರೆ ದ್ವೇಷ ಸಾಧಿಸಿರುವ ಸೋನು, ತನ್ನ ಮನದನ್ನೆ ರೀನಾ ಮತ್ತು ಆಕೆಯ ಇಬ್ಬರು ಅಕ್ಕಂದಿರನ್ನೂ ಕೊಂದು ಹಾಕಿದ್ದಾನೆ. ಚಂಡೀಗಢದಿಂದ ರೈಲಿನಲ್ಲಿ ಬಂದು ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ಮೂವರೂ ಸಹೋದರಿಯರು ಜತೆಯಾಗಿ ಮಲಗಿದ್ದ ಹೊತ್ತಿನಲ್ಲಿ ಸೋನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪೊಲೀಸರು ಸ್ಥಳದಿಂದ ಪೆಟ್ರೋಲ್ ಕ್ಯಾನ್ ಮತ್ತು ಬೆಂಕಿಪೊಟ್ಟಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯರು ಮಲಗಿದ್ದ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಉಷಾ ದೇವಿಯವರ ಇಬ್ಬರು ಮಕ್ಕಳಾದ ಸಾಹಿಲ್ (9) ಮತ್ತು ನಿಶಾ (7) ಈತನ ದಾಷ್ಟ್ಯದಿಂದ ಪಾರಾಗಿದ್ದಾರೆ. ಅವರು ತಮ್ಮ ಅಜ್ಜಿಯ ಜತೆ ಮಲಗಿದ್ದ ಕಾರಣ ಅತ್ತ ಆರೋಪಿ ಸುಳಿದಿರಲಿಲ್ಲ.

ಪೊಲೀಸರ ಪ್ರಕಾರ ತನ್ನ ಅತ್ತಿಗೆ-ನಾದಿನಿಯರು ಮಲಗಿದ್ದ ಹೊತ್ತಿನಲ್ಲಿ ಹೊರಗಿನಿಂದ ಕೋಣೆಯನ್ನು ಲಾಕ್ ಮಾಡಿ, ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೋಣೆಯ ಬಾಗಿಲುಗಳಲ್ಲಿ ಪೆಟ್ರೋಲ್ ಸುರಿದಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ನಂತರ ಸೋನು ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ಪೊಲೀಸ್ ತಂಡಗಳನ್ನೂ ರಚಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ