ಯಡ್ಡಿಯನ್ನು ಕೆಳಗಿಳಿಸಿ, ನಂತರ ಬೆರಳು ತೋರಿಸಿ: ಕಾಂಗ್ರೆಸ್
ನವದೆಹಲಿ, ಗುರುವಾರ, 9 ಡಿಸೆಂಬರ್ 2010( 09:21 IST )
ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದರೂ ಕರ್ನಾಟಕ ಮುಖ್ಯಮಂತ್ರಿ ಪದವಿಯಲ್ಲಿ ಬಿ.ಎಸ್. ಯಡಿಯೂರಪ್ಪನವರಿಗೆ ಮುಂದುವರಿಯಲು ಅವಕಾಶ ನೀಡಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಮೊದಲು ನಿಮ್ಮನ್ನು ನೀವು ರಿಪೇರಿ ಮಾಡಿಕೊಳ್ಳಿ. ನಂತರ ನಮ್ಮತ್ತ ಬೆರಳು ತೋರಿಸಿ ಎಂದು ಸಲಹೆ ನೀಡಿದೆ.
2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಿಗೆ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.
ಸಿಬಿಐ ಯಾವುದಾದರೂ ಕ್ರಮವನ್ನು ತೆಗೆದುಕೊಂಡಿದ್ದರೆ, ಅದು ತನಿಖೆಯ ಅಗತ್ಯವಾಗಿರುತ್ತದೆ. ಕಾಂಗ್ರೆಸ್ ಮತ್ತು ಯುಪಿಎ ಸರಕಾರವು ಕಾನೂನು ಕೊನೆಗೂ ಗೆಲ್ಲುತ್ತದೆ ಎಂಬುದರಲ್ಲಿ ನಂಬಿಕೆಯಿಟ್ಟಿದೆ. ಶಾಸನಬದ್ಧ ಸಂಸ್ಥೆಗಳ ಕಾರ್ಯ ಚಟುವಟಿಕೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಅಥವಾ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸಂಸತ್ತಿನ ಹೊರಗಡೆ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದರು.
ರಾಜಾ ಮತ್ತು ದೂರಸಂಪರ್ಕ ಇಲಾಖೆಯ ಇತರ ಅಧಿಕಾರಿಗಳ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಒತ್ತಿ ಹೇಳುತ್ತಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಕರ್ನಾಟಕದಲ್ಲಿ ಭೂ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸದೆ ಮುಂದುವರಿಸಿರುವ ನೀವು, ಇತರರ ವಿಚಾರಗಳ ಬಗ್ಗೆ ಪ್ರಶ್ನಿಸುವ ನೈತಿಕತೆಯನ್ನು ಹೊಂದಿಲ್ಲ. ಮೊದಲು ಯಡಿಯೂರಪ್ಪನವರನ್ನು ಕೆಳಗಿಳಿಸಿ. ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ತಿವಾರಿ ಹೇಳಿದರು.
ಸಿಬಿಐ ನಡೆಸಿರುವ ದಾಳಿಗಳು ಕೇವಲ ಕಣ್ಣೊರೆಸುವ ತಂತ್ರ. ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ಬಿಜೆಪಿ ಹೇಳಿತ್ತು.