ಮೊದಲು ತಾವು ಬದಲಾಗಬೇಕು, ನಂತರ ಉಳಿದವರು ಎಂಬ ನೀತಿಯನ್ನು ಸಾರುವ ವಿಚಾರವಿದು. ವಿದ್ಯಾರ್ಥಿಗಳು ಸಭ್ಯ ದಿರಿಸುಗಳೊಂದಿಗೆ ಕಾಲೇಜಿಗೆ ಬರಬೇಕು ಎನ್ನುವದನ್ನು ಗಮನದಲ್ಲಿಟ್ಟುಕೊಂಡಿರುವ ಕಾಲೇಜೊಂದು, ಮೊದಲು ಶಿಕ್ಷಕರು ಚೂಡಿದಾರ, ಜೀನ್ಸ್‌ಗಳನ್ನು ಹಾಕುವುದನ್ನು ನಿಲ್ಲಿಸಿ ಕ್ರಮವಾಗಿ ಸೀರೆ ಉಟ್ಟುಕೊಂಡು ಬರಬೇಕು ಎಂದು ಸೂಚನೆ ನೀಡಿದೆ.
ಮಧ್ಯಪ್ರದೇಶದ ಭೋಪಾಲದಲ್ಲಿನ ಸರೋಜಿನಿ ನಾಯ್ಡು ಕಾಲೇಜು ಇಂತಹ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಶಿಕ್ಷಕಿಯರು ಚೂಡಿದಾರ, ಕುರ್ತಾಗಳು, ಟಿ-ಶರ್ಟ್‌ಗಳು, ಜೀನ್ಸ್‌ಗಳನ್ನು ಹಾಕಿಕೊಂಡು ಕಾಲೇಜು ಕ್ಯಾಂಪಸ್ಸಿಗೆ ಕಾಲಿಡಬಾರದು. ಕಡ್ಡಾಯವಾಗಿ ಸೀರೆ ಉಡಬೇಕು ಎಂದು ಹೇಳಿದೆ.
WD
ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ನಿರ್ಬಂಧ ಇಲ್ಲದೇ ಇದ್ದ ಕಾರಣ, ಶಿಕ್ಷಕರಿಗೆ ಯಾವುದೇ ವಸ್ತ್ರಸಂಹಿತೆ ಇರಲಿಲ್ಲ. ತಾರತಮ್ಯ ಬೇಡ ಎಂಬ ನಿಟ್ಟಿನಲ್ಲಿ ಹೀಗೆ ಮಾಡಲಾಗಿತ್ತು. ಆದರೆ ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಮೇಲೂ ವಸ್ತ್ರಸಂಹಿತೆ ಹೇರಲಾಗುತ್ತದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಶಿಕ್ಷಕರಿಗೆ ಶಿಸ್ತಿನ ಪಾಠ ಶುರು ಮಾಡಲಾಗಿದೆ ಎಂದು ಕಾಲೇಜಿನ ವಕ್ತಾರರು ತಿಳಿಸಿದ್ದಾರೆ.
ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವರ್ಷದ ಮಧ್ಯದಲ್ಲಿ ವಸ್ತ್ರಸಂಹಿತೆ ಹೇರುವುದಿಲ್ಲ. 2011ರ ಶೈಕ್ಷಣಿಕ ವರ್ಷದ ಆರಂಭದಿಂದ ಅವರಿಗೂ ಇದೇ ಡ್ರೆಸ್ ಕೋಡ್ ಅನ್ವಯವಾಗುತ್ತದೆ. ನಂತರ ವಿದ್ಯಾರ್ಥಿಗಳು ಕೂಡ ಜೀನ್ಸ್, ಚೂಡಿದಾರ, ಟಿ-ಶರ್ಟ್, ಕುರ್ತಾಗಳನ್ನು ಧರಿಸುವಂತಿಲ್ಲ ಎಂದು ಕಾಲೇಜು ಹೇಳಿದೆ.
ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲು ಮುಖ್ಯ ಕಾರಣವಾಗಿರುವುದು ವಿದ್ಯಾರ್ಥಿನಿಯರಂತೆ. ಮೈಗಂಟಿಕೊಳ್ಳುವ ಟಾಪ್ ಮತ್ತು ಲೋ-ವೈಸ್ಟ್ ಜೀನ್ಸ್ ಧರಿಸಿ ಕಾಲೇಜಿನಲ್ಲಿ ಅಸಭ್ಯ ವಾತಾವರಣವನ್ನು ಸೃಷ್ಟಿಸುತ್ತಿದ್ದರಿಂದ ಸ್ವತಃ ಪ್ರಾಧ್ಯಾಪಕರು ಮುಜುಗರ ಅನುಭವಿಸುತ್ತಿದ್ದರು. ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಇಂತಹ ನಡೆ ಅನುಸರಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪ್ರೊಫೆಸರ್ ಒಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪುರುಷ ಪ್ರಾಧ್ಯಾಪಕರಿಗೆ ಕೂಡ ವಸ್ತ್ರಸಂಹಿತೆ ಅನ್ವಯಿಸುತ್ತದೆ. ಅವರು ಟಿ-ಶರ್ಟ್, ಜೀನ್ಸ್ ಧರಿಸಿ ಕಾಲೇಜಿಗೆ ಬರುವಂತಿಲ್ಲ.