ಶ್ರೀನಗರದಲ್ಲಿ ಗಣರಾಜ್ಯೋತ್ಸವ ದಿನದಂದು ಭಾರತದ ಧ್ವಜ ಹಾರಿಸುವ ಮೂಲಕ ಶಾಂತಿ ಕದಡುವ ಯತ್ನ ಮಾಡಬೇಡಿ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಿಜೆಪಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಕಾಶ್ಮೀರವು ಅಲ್ಲಿಂದಲ್ಲಿಗೆ ಶಾಂತಿಯಲ್ಲಿರುವ ಹೊತ್ತಿಗೆ ಬಿಜೆಪಿ ಅದನ್ನು ಕದಡಿಸಲು ಯತ್ನಿಸುತ್ತಿದೆ. ಅವರ ಉದ್ದೇಶ ಕಾಶ್ಮೀರವನ್ನು ದಳ್ಳುರಿಗೆ ತಳ್ಳುವುದೇ ಆಗಿದ್ದರೆ, ದಯವಿಟ್ಟು ಹಾಗೆ ಮಾಡಬೇಡಿ ಎಂದು ಯಾರಾದರೂ ಅವರಿಗೆ ಹೇಳಿ. ಅವರಿಂದಾಗಿ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಅವರನ್ನೇ ಹೊಣೆಗಾರರನ್ನಾಗಿ ನಾನು ಮಾಡುತ್ತೇನೆ ಎಂದು ಒಮರ್ ಗುಡುಗಿದ್ದಾರೆ.
ಧ್ವಜಾರೋಹಣದಿಂದಾಗಿ ಕಾಶ್ಮೀರದಲ್ಲಿ ಶಾಂತಿ ಕದಡಿದರೆ ಅದರ ಹೊಣೆಯನ್ನು ನಾನು ಹೊರಲಾರೆ. ಅವರೇ (ಬಿಜೆಪಿ) ಬಂದು ಅದನ್ನು ಪರಿಹಾರ ಮಾಡಬೇಕು. ಯಾವ ಕಾರಣಕ್ಕೂ ನನ್ನ ಕಡೆ ಬೆಟ್ಟು ಮಾಡಿ ತೋರಿಸಬೇಡಿ. ಆ ದಿನ ಶ್ರೀನಗರದಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ವೈಯಕ್ತಿಕವಾಗಿ ಧ್ವಜ ಹಾರಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಜಮ್ಮು-ಕಾಶ್ಮೀರದ ಹಲವು ಕಡೆ ಧ್ವಜ ಹಾರಿಸಲಾಗುತ್ತದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವಿರುತ್ತದೆ. ಪ್ರತಿ ಸೆಕ್ಯುರಿಟಿ ಕ್ಯಾಂಪ್, ಸೇನಾ ನೆಲೆ ಮತ್ತು ಪೊಲೀಸ್ ಠಾಣೆಗಳಲ್ಲಿ ಈ ಕಾರ್ಯಕ್ರಮವಿರುತ್ತದೆ. ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡಬೇಕೆಂಬ ಆಸೆ ಬಿಜೆಪಿಗೆ ಯಾಕೆ? ನಮಗಿಂತ ಹೆಚ್ಚು ರಾಷ್ಟ್ರೀಯತೆ ಅವರಲ್ಲಿದೆಯೇ? ಒಬ್ಬ ಸಚಿವರು ಶ್ರೀನಗರದಲ್ಲಿ ಧ್ವಜ ಹಾರಿಸುವುದಕ್ಕಿಂತ ಅವರ ಧ್ವಜಾರೋಹಣವೇ ಹೆಚ್ಚು ಸೂಕ್ತವೆಂದು ಅನಿಸುತ್ತಿದೆಯೇ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮುಖ್ಯಮಂತ್ರಿ ಹಾಕಿದ್ದಾರೆ.