ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಕಾವೇರಿ'ದ ವಿವಾದ; ಕೇಂದ್ರದ ಮೂಲಕ ತಮಿಳುನಾಡು ಒತ್ತಡ (Cauvery Water | Karnataka | Tamil Nadu | SV Ranganath)
ಕಾವೇರಿ ಜಲ ಹಂಚಿಕೆ ಕುರಿತ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿರುವುದರಿಂದ, ಆ ತೀರ್ಪು ಬರುವವರೆಗೆ ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದ ನೀರನ್ನು ಹಂಚಿಕೆ ಮಾಡುವ ಶಾಶ್ವತ ಸೂತ್ರವೊಂದಕ್ಕೆ ಒಪ್ಪಿಕೊಳ್ಳುವಂತೆ ಕರ್ನಾಟಕದ ಮೇಲೆ ಕೇಂದ್ರ ಸರಕಾರದ ಮೂಲಕ ಒತ್ತಡ ಹೇರುವ ತಂತ್ರಕ್ಕೆ ಪಕ್ಕದ ರಾಜ್ಯ ಮುಂದಾಗಿದೆ.

ಈ ಸಂಬಂಧ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಧ್ರು ವಿಜಯ್ ಸಿಂಗ್ ಕರೆದಿದ್ದ ಸಭೆಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮತ್ತು ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಸ್. ಮಾಲತಿ ಅವರು ಹಾಜರಾಗಿದ್ದರು. ತಮಿಳುನಾಡಿಗೆ ನೀರು ಬಿಡುವ ಸಂಬಂಧ ಸಂಕಷ್ಟ ಸೂತ್ರವೊಂದನ್ನು ರೂಪಿಸಿ, ಜಾರಿಗೆ ತರುವ ವಿಚಾರದಲ್ಲಿ ಕರ್ನಾಟಕ್ಕೆ ಒತ್ತಡ ಹೇರಲು ಇದೇ ಸಂದರ್ಭದಲ್ಲಿ ತಮಿಳುನಾಡು ಒತ್ತಾಯಿಸಿತು.

ಕಾವೇರಿ ಜಲ ವಿವಾದ ನ್ಯಾಯಾಧಿಕರಣ (ಸಿಡಬ್ಲ್ಯೂಡಿಟಿ) ರೂಪಿಸುವ ಸಂಕಷ್ಟ ಸೂತ್ರವೊಂದನ್ನು ಅಂತಿಮಗೊಳಿಸುವ ಸಂಬಂಧ ಶೀಘ್ರದಲ್ಲೇ ಕಾವೇರಿ ನದಿ ಪ್ರಾಧಿಕಾರವು ಸಭೆ ನಡೆಸಲಿದೆ ಎಂಬ ಸಂಕೇತವನ್ನು ರವಾನಿಸಲಾಗಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಸೂತ್ರವನ್ನು ಒಪ್ಪಿಕೊಳ್ಳುವಂತೆ ಕರ್ನಾಟಕವನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಶುಕ್ರವಾರದ ಸಭೆಯಲ್ಲೂ ಕರ್ನಾಟಕದ ಮೇಲೆ ಒತ್ತಡ ಹೇರುವ ಯತ್ನ ನಡೆಯಿತು. ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಶಾಶ್ವತ ಸಂಕಷ್ಟ ಸೂತ್ರವೊಂದನ್ನು ಕರ್ನಾಟಕ ಒಪ್ಪಿಕೊಂಡು, ನಿರ್ದಿಷ್ಟ ನೀರನ್ನು ಕಡ್ಡಾಯವಾಗಿ ಹರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು.

ಆದರೆ ಇದನ್ನು ತಳ್ಳಿ ಹಾಕಿದ ಕರ್ನಾಟಕವು, ಸೂತ್ರದಂತೆ ನಡೆದುಕೊಳ್ಳುವುದು ಸಾಧ್ಯವಿಲ್ಲ. ಇಲ್ಲಿ ನೀರಿನ ಲಭ್ಯತೆಯೇ ಪ್ರಮುಖವಾಗುತ್ತದೆ. ಮಳೆ ಬರದೇ ಇದ್ದಾಗ ನಾವು ನೀರು ಹರಿಸುವುದು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯನ್ನು ನೋಡಿಕೊಂಡು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದಿತು.

ಕಾವೇರಿ ಮೇಲ್ವಿಚಾರಣಾ ಸಮಿತಿಯು 2003ರಲ್ಲೂ ಇದೇ ರೀತಿಯ ಸಂಕಷ್ಟ ಸೂತ್ರವೊಂದನ್ನು ರೂಪಿಸುವ ವಿಫಲ ಯತ್ನ ನಡೆಸಿತ್ತು ಎಂದೂ ಕರ್ನಾಟಕವು ಸಭೆಯಲ್ಲಿ ಪ್ರಸ್ತಾಪಿಸಿತು.

ಇದೇ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ, ಕಾವೇರಿ ವಿಚಾರವನ್ನು ಡಿಎಂಕೆ ಸರಕಾರವು ಕೆದಕಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಲೇಖನಗಳು