ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಾ ಜೈಲಿಗೆ; ಯಡ್ಡಿ, ಕಲ್ಮಾಡಿ, ಚೌಹಾನ್‌ ಮುಂದಿನ ಸರದಿ? (A Raja | Ashok Chavan | BS Yeddyurappa | Suresh Kalmadi)
PTI
ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ಅವರನ್ನು ಸಿಬಿಐ ಬಂಧಿಸಿದ ಬೆನ್ನಿಗೆ 2010ರ ವರ್ಷದ 'ಮಹಾನ್ ಖದೀಮರು' ಎಂದು ಜನತೆಯಿಂದ ಬಿರುದು ಗಿಟ್ಟಿಸಿಕೊಂಡ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಖ್ಯಾತಿಯ ಸುರೇಶ್ ಕಲ್ಮಾಡಿ ಎದೆ ಢವಗುಟ್ಟತೊಡಗಿದೆ.

2007ರ ಅಕ್ಟೋಬರ್ ತಿಂಗಳಿಂದ 2008ರ ನಡುವೆ ಹರಾಜು ನಡೆಸದೆ ಅಕ್ರಮವಾಗಿ ಹಂಚಿಕೆ ಮಾಡಿದ 2ಜಿ ತರಂಗಾಂತರಗಳಿಂದಾಗಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ನೀಡಿದ ನಂತರ, ಡಿಎಂಕೆ ಮತ್ತು ಕಾಂಗ್ರೆಸ್ ಜತೆಯಾಗಿ ರಾಜಾ ಅವರನ್ನು ಸಮರ್ಥಿಸಿಕೊಂಡಿದ್ದವು.

ರಾಜಾ ರಾಜೀನಾಮೆ ಬಳಿಕವೂ ಅವರನ್ನು ಉಭಯ ಪಕ್ಷಗಳು ಬಿಟ್ಟುಕೊಟ್ಟಿರಲಿಲ್ಲ. ಎನ್‌ಡಿಎ ಸರಕಾರದ ನೀತಿಗಳನ್ನೇ ದೂರಸಂಪರ್ಕ ಸಚಿವರು ಅನುಸರಿಸಿದ್ದರು. ಅವರದ್ದೇನೂ ತಪ್ಪಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಈಗಿನ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಂತೂ ಸಿಎಜಿ ವರದಿಯಲ್ಲಿ ಹುರುಳೇ ಇಲ್ಲ ಎಂಬಷ್ಟರ ಮಟ್ಟಕ್ಕೆ ಹೋಗಿ ಸುಪ್ರೀಂ ಕೋರ್ಟಿನಿಂದ ಉಗಿಸಿಕೊಂಡಿದ್ದರು.

ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂಬ ಆರೋಪಗಳ ಹೊರತಾಗಿಯೂ, ತಡವಾಗಿಯಾದರೂ ಯುಪಿಎ ಸರಕಾರದ ಮಿತ್ರಪಕ್ಷವೊಂದರ ಪ್ರಮುಖ ನಾಯಕ ಹಾಗೂ ತನ್ನ ಮಾಜಿ ಸಚಿವರನ್ನು ಬಂಧಿಸಲು ತನಿಖಾ ಸಂಸ್ಥೆಗೆ ಸರಕಾರ ಅನುಮತಿ ನೀಡಿದೆ. ಇದರ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ಅಂಶಗಳಿರುವುದನ್ನು ತಳ್ಳಿ ಹಾಕಲಾಗದು. ಆದರೂ ಇಂತಹ ಕ್ರಮಕ್ಕೆ ಮುಂದಾಗಿರುವುದು ಕಾಂಗ್ರೆಸ್ ಘನತೆಯನ್ನು ಕೊಂಚ ಮಟ್ಟಿಗೆ ಹೆಚ್ಚಿಸಿರುವುದು ಹೌದು.

PTI
ಸುರೇಶ್ ಕಲ್ಮಾಡಿ...
ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸುರೇಶ್ ಕಲ್ಮಾಡಿ ಆರಂಭದಿಂದಲೇ ವಿವಾದಗಳಿಗೆ ಸಿಲುಕಿದವರು. ಕಾಮಗಾರಿಗಳ ವೆಚ್ಚಗಳು ಹತ್ತಾರು ಪಟ್ಟು ಹೆಚ್ಚುಗೊಂಡರೂ ಇವರ ಕುರಿತು ಗಂಭೀರವಾಗಿ ಚಿಂತಿಸಲು ಸ್ವತಃ ಪ್ರಧಾನಿಯೇ ಮುಂದಾಗಿರಲಿಲ್ಲ.

ಇಷ್ಟಾದರೂ ಗೇಮ್ಸ್ ಸಂಘಟನೆ ಅತ್ಯುತ್ತಮವಾಗಿರುತ್ತಿದ್ದರೆ ಕನಿಷ್ಠ ಕಲ್ಮಾಡಿಯವರ ಶ್ರಮವನ್ನಾದರೂ ಮೆಚ್ಚಬಹುದಿತ್ತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಖಕ್ಕೆ ಮಸಿ ಬಳಿಯುವಂತಾಯಿತು.

ಕಾಂಗ್ರೆಸ್ ಸಂಸದನೂ ಆಗಿರುವ ಕಲ್ಮಾಡಿ ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿ ಗುತ್ತಿಗೆಗಳನ್ನು ತನ್ನ ಆಪ್ತರಿಗೆ ನೀಡಿ ಸಮರ್ಥಿಸಿಕೊಂಡಿದ್ದನ್ನು ಆರಂಭದಲ್ಲಿ ಸ್ವತಃ ಅವರ ಪಕ್ಷವೇ ಬೆಂಬಲಿಸಿತು. ಆದರೆ ಪ್ರತಿಪಕ್ಷಗಳ ಕಿರಿಕ್ ಜೋರಾದ ನಂತರ ಪ್ರತ್ಯಕ್ಷ ಬೆಂಬಲದಿಂದ ಕಾಂಗ್ರೆಸ್ ಹಿಂದಕ್ಕೆ ಸರಿಯಿತಾದರೂ, ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಲಿಲ್ಲ.

ಸಹಜವಾಗಿಯೇ ಸಿಬಿಐ ಮೇಲೆ ಎಲ್ಲರೂ ಸಂಶಯ ಪಡುವಂತಾಯಿತು. ಆದರೆ ಇತ್ತೀಚೆಗೆ ಅವರ ಮೇಲೆ ಸಿಬಿಐ ಕೇಸೊಂದನ್ನು ದಾಖಲಿಸಿದೆ. ಸಂಘಟನಾ ಸಮಿತಿ ಅಧ್ಯಕ್ಷ ಸ್ಥಾನದಿಂದಲೂ ಪದಚ್ಯುತಗೊಳಿಸಲಾಗಿದೆ. ಇನ್ನು ಕಲ್ಮಾಡಿಯವರನ್ನು ಬಂಧಿಸಲಾಗುತ್ತದೆಯೇ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.

MOKSHA
ಬಿ.ಎಸ್. ಯಡಿಯೂರಪ್ಪ...
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರದ್ದು ಹಗರಣವೋ, ಅಕ್ರಮವೋ ಎನ್ನುವುದು ಇದುವರೆಗೆ ಸಾಬೀತಾಗಿಲ್ಲ. ಆದರೆ ಅವರು ತನ್ನ ಮಕ್ಕಳಿಗೆ, ಅಳಿಯಂದಿರಿಗೆ ಸರಕಾರಿ ಭೂಮಿಯನ್ನು ಹಂಚಿಕೆ ಮಾಡಿದ್ದಂತೂ ಖಚಿತ. ಆ ಮೂಲಕ ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.

ಎಷ್ಟೇ ಭ್ರಷ್ಟಾಚಾರ ಮಾಡಿದರೂ ಯಡಿಯೂರಪ್ಪನವರನ್ನು ಬದಲಾಯಿಸುವ ಪ್ರಶ್ನೆ ಬಿಜೆಪಿ ಮುಂದೆ ಇದ್ದಂತಿಲ್ಲ. ಅವರನ್ನು ಈ ಕ್ಷಣದವರೆಗೂ ಸಮರ್ಥಿಸುತ್ತಾ ಬಂದಿದೆ. ಕೇಂದ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ, ರಾಜೀನಾಮೆ ಕೇಳುವ ಬಿಜೆಪಿಯು ಕರ್ನಾಟಕದಲ್ಲಿ ಕಳಂಕಿತ ವ್ಯಕ್ತಿಯೊಬ್ಬರನ್ನು ಶಕ್ತಿಕೇಂದ್ರದಲ್ಲಿ ಮುಂದುವರಿಸಿರುವುದು ನೈತಿಕವಾಗಿ ಸರಿಯಲ್ಲ ಎನ್ನುವುದೇ ಎಲ್ಲರ ಅಭಿಪ್ರಾಯ.

ಈಗ ಅವರ ವಿರುದ್ಧ ನ್ಯಾಯಾಲಯದಲ್ಲಿ ಹತ್ತಾರು ಪ್ರಕರಣಗಳೂ ದಾಖಲಾಗಿವೆ. ಅತ್ತ ಲೋಕಾಯುಕ್ತ ಮತ್ತು ನ್ಯಾಯಾಂಗ ತನಿಖೆಗೂ ಆದೇಶ ನೀಡಲಾಗಿದೆ. ಈ ನಡುವೆ ಮುಖ್ಯಮಂತ್ರಿಯವರನ್ನು ಬಂಧಿಸುವ ಅಥವಾ ಕನಿಷ್ಠ ರಾಜೀನಾಮೆ ಕೊಡಿಸುವ ಮಟ್ಟಿಗಾದರೂ ತನಿಖಾ ಸಂಸ್ಥೆಗಳು ಅಥವಾ ನ್ಯಾಯಾಲಯಗಳು ಕ್ರಮಕ್ಕೆ ಮುಂದಾಗಲಿವೆಯೇ ಎಂಬುದನ್ನು ಕಾದು ನೋಡಬೇಕು.

ಯಡಿಯೂರಪ್ಪನವರ ಭೂ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿಲ್ಲ. ಆದರೆ ಉಚ್ಚ ನ್ಯಾಯಾಲಯವು ಸಿಬಿಐ ತನಿಖೆಗೆ ಪ್ರಕರಣವೊಂದನ್ನು ವಹಿಸುವ ಅಧಿಕಾರವನ್ನು ಹೊಂದಿರುವುದರಿಂದ, ಯಡಿಯೂರಪ್ಪ ಸಿಬಿಐ ಮೂಲಕವೇ ಬಂಧನಕ್ಕೊಳಗಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

PTI
ಅಶೋಕ್ ಚೌಹಾನ್...
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾನ್ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದವರು. ತನ್ನ ಅತ್ತೆ ಸೇರಿದಂತೆ ಹಲವರಿಗೆ ಮಿಲಿಟರಿ ನಿವೇಶನಗಳನ್ನು ಕೊಡಿಸಿ ಯೋಧರೆನಿಸಿಕೊಂಡು ಕೊನೆಗೆ ಸಿಕ್ಕಿ ಬಿದ್ದವರು.

ಇತ್ತೀಚೆಗಷ್ಟೇ ಚೌಹಾನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಗರಣದ ಕುರಿತು ಸಿಬಿಐ ಭರದಿಂದ ತನಿಖೆ ನಡೆಸುತ್ತಿದೆ. ಹಾಗಾಗಿ ಚೌಹಾನ್ ಜೈಲು ಸೇರಿದರೂ ಅಚ್ಚರಿ ಪಡಬೇಕಾಗಿಲ್ಲ.
ಇವನ್ನೂ ಓದಿ