ಮಧ್ಯಪ್ರದೇಶದ ಬಿಜೆಪಿ ಸರಕಾರವು ರಾಜ್ಯದಲ್ಲಿ ಧಾರ್ಮಿಕ ಮೂಲಭೂತವಾದಿಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ.
ಇಂದೋರ್‌ನಲ್ಲಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವರು, ಮಧ್ಯಪ್ರದೇಶದ ಬಿಜೆಪಿ ಸರಕಾರವು ಜನರಲ್ಲಿ ಒಡಕನ್ನು ಸೃಷ್ಟಿಸುತ್ತಿದೆ. ಅದು ಸಮಾಜ ವಿಭಜನೆಯತ್ತ ಹೊರಟಿದೆ. ಧಾರ್ಮಿಕ ಮೂಲಭೂತವಾದಿಗಳನ್ನು ಪ್ರಚೋದಿಸುವತ್ತ ಸಾಗುತ್ತಿದೆ ಎಂದರು.
ಮಧ್ಯಪ್ರದೇಶದಲ್ಲಿ ಶಿಶು ಮರಣ ಪ್ರಮಾಣ ಕೂಡ ಸಮಧಾನಕರ ಪರಿಸ್ಥಿತಿಯಲ್ಲಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇತರ ಸಾಮಾಜಿಕ ಪ್ರಗತಿಯ ವಿಚಾರದಲ್ಲಿ ಕೂಡ ಮಧ್ಯಪ್ರದೇಶ ತುಂಬಾ ಹಿಂದಿದೆ ಎಂದು ದೂರಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಪ್ರಚಾರ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಪಣ ತೊಡಿ ಎಂದರು.
2008ರ ಡಿಸೆಂಬರ್ 12ರಂದು ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಿವರಾಜ್ ಸಿಂಗ್ ಚೌಹಾನ್ ಅವರ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಕೇಂದ್ರದ ಸಚಿವರು ವಾಗ್ದಾಳಿ ನಡೆಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಗುರಿಯನ್ನಿಟ್ಟುಕೊಂಡಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕೊನೆಯ ಬಾರಿ ಅಧಿಕಾರಕ್ಕೆ ಬಂದದ್ದು 1998ರಲ್ಲಿ. ದಿಗ್ವಿಜಯ್ ಸಿಂಗ್ ಸರಕಾರವು 2003ರ ಡಿಸೆಂಬರ್ 8ರವರೆಗೆ ಆಡಳಿತ ನಡೆಸಿತ್ತು. ಆ ಬಳಿಕ ಬಿಜೆಪಿ ಸತತ ನಾಲ್ಕು ಬಾರಿ ಸರಕಾರ ರಚಿಸಿದೆ.